ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣ ಸಿಬಿಐ ತನಿಖೆಗೆ ವಹಿಸಲು ಸಂಪುಟ ನಿರ್ಧಾರ

ಸೋಮವಾರ, 31 ಆಗಸ್ಟ್ 2015 (16:14 IST)
ಹಿರಿಯ ಸಾಹಿತಿ ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ರಾಜ್ಯದ ಸಚಿವ ಸಂಪುಟ ಸಮ್ಮತಿ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.
 
ಕಲಬುರ್ಗಿ ಹತ್ಯೆ ಕುರಿತಂತೆ ಬಹುತೇಕ ಸಚಿವರು ಆಘಾತ ವ್ಯಕ್ತಪಡಿಸಿದ್ದು ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಬಯಸಿರುವುದಾಗಿ ಮೂಲಗಳು ತಿಳಿಸಿದ್ದಾರೆ. ರಾಜ್ಯ ಸರಕಾರ ಈಗಾಗಲೇ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದ್ದು, ತನಿಖೆ ಆರಂಭಿಸಲಾಗಿದೆ. ಅಧಿಕಾರಿಗಳು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
 
ಒಂದು ವೇಳೆ ಸಿಬಿಐ ಪ್ರಕರಣದ ತನಿಖೆ ನಡೆಸಲು ಒಪ್ಪಿದಲ್ಲಿ ಸಿಬಿಐಗೆ ವಹಿಸಲಾಗುವುದು. ಘಟನೆಯ ಬಗ್ಗೆ ಸಿಬಿಐಗೆ ರಾಜ್ಯ ಸರಕಾರ ಪತ್ರ ಬರೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಪ್ರಕರಣವನ್ನು ಸಿಬಿಐಗೆ ವಹಿಸಲು ಗ್ರೀನ್ ಸಿಗ್ನಲ್ ನೀಡಿದೆ ಎಂದು ಗೃಹ ಸಚಿವಾಲಯದ ಮೂಲಗಳು ತಿಳಿಸಿವೆ.
 
ಹಿರಿಯ ಸಂಶೋಧಕರಾಗಿದ್ದ ಎಂ.ಎಂ.ಕಲಬುರ್ಗಿಯವರನ್ನು ಅವರ ನಿವಾಸದಲ್ಲಿಯೇ ಇಬ್ಬರು ಆರೋಪಿಗಳು ಗುಂಡಿಕ್ಕಿ ಹತ್ಯೆ ಮಾಡಿ ಪರಾರಿಯಾಗಿದ್ದರು. 

ವೆಬ್ದುನಿಯಾವನ್ನು ಓದಿ