ಮಹದಾಯಿ-ಕಳಸಾ ಬಂಡೂರಿ ಪ್ರತಿಭಟನೆ: ವಾಟಾಳ್ ನಾಗರಾಜ ಬಂಧನ

ಶನಿವಾರ, 15 ಅಕ್ಟೋಬರ್ 2016 (19:30 IST)
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಣಕುಂಬಿಯಲ್ಲಿ ಮಹದಾಯಿ-ಕಳಸಾ ಬಂಡೂರಿ ಯೋಜನೆಗಾಗಿ ಪ್ರತಿಭಟನೆಗೆ ಮುಂದಾಗಿದ್ದ ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗಾರಾಜ್ ಅವರನ್ನು ಬಂಧಿಸಲಾಗಿದೆ.
 
ವಾಟಾಳ್ ನಾಗರಾಜ್, ನಿರ್ಮಾಪಕ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು, ಕಳಸಾ ಬಂಡೂರಿ ಹೋರಾಟ ಸಮಿತಿ ಅಧ್ಯಕ್ಷ ವಿನಯ್ ಕಲಕರ್ಣಿ ಸೇರಿದಂತೆ ಹಲವು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 
 
ಕಣಕುಂಬಿ ಗ್ರಾಮದಲ್ಲಿನ ಮಹದಾಯಿ ಉಗಮಸ್ಥಾನದ ಬಳಿ ಹೋಗಿ ಪ್ರತಿಭಟಿಸಲು ನಿರ್ಧರಿಸಿದ್ದರು. ಆದರೆ, ಇದಕ್ಕೆ ಅವಕಾಶ ನೀಡದೆ ದಾರಿ ಮಧ್ಯಯೇ ಪೊಲೀಸರು ಇವರನ್ನು ಬಂಧಿಸಿದರು. 
 
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗಾರಾಜ್, ಮಹದಾಯಿ ಬಿಕ್ಕಟ್ಟು ಇತ್ಯರ್ಥಗೊಳಿಸಲು ಪ್ರಧಾನಿ ಮೋದಿ ಮಧ್ಯಸ್ಥಿಕೆ ವಹಿಸಬೇಕು. ಯಾವುದೇ ಕಾರಣಕ್ಕೂ ಮೂರು ರಾಜ್ಯದ ಸಿಎಂಗಳ ಮಾತುಕತೆ ವಿಫಲವಾಗಬಾರದು. ಕಾವೇರಿ ಹಾಗೂ ಮಹದಾಯಿ ಹೋರಾಟಗಾರರ ಮೇಲಿನ ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ