ಮಲೇಷ್ಯಾ ವಿಮಾನದ ಟೈರ್ ಸ್ಫೋಟದಿಂದ ಪ್ರಯಾಣಿಕರ ಆತಂಕ

ಮಂಗಳವಾರ, 22 ಏಪ್ರಿಲ್ 2014 (12:46 IST)
ಬೆಂಗಳೂರು: ಮಲೇಷ್ಯಾದಿಂದ ಬೆಂಗಳೂರಿಗೆ ಹೊರಟಿದ್ದ ವಿಮಾನವು ಟೇಕ್ ಆಫ್ ಆದ ಸ್ವಲ್ಪ ಹೊತ್ತಲ್ಲೇ ಕೌಲಾಲಂಪುರ ನಿಲ್ದಾಣಕ್ಕೆ ಹಿಂತಿರುಗಿದ ಘಟನೆ ಬಳಿಕ ವಿಮಾನ ತಡವಾಗಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ತ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ಲ್ಯಾಂಡ್ ಆಗಿದೆ. ವಿಮಾನದ ಟೈರ್ ಸ್ಫೋಟಗೊಂಡಿದ್ದ ಕಾರಣ ವಿಮಾನ ಪುನಃ ಹಿಂತಿರುಗಿತ್ತು. ರಾತ್ರಿ 11.40ರ ಸುಮಾರಿಗೆ ವಿಮಾನವನ್ನು ಸುರಕ್ಷಿತವಾಗಿ ಕೆಳಗಿಳಿಸಲಾಗಿತ್ತು. 
 
MH192 ಮಲೇಷ್ಯಾ ವಿಮಾನದಲ್ಲಿದ್ದ ಎಲ್ಲ 159 ಮಂದಿ ಪ್ರಯಾಣಿಕರು, 7 ಮಂದಿ ಸಿಬ್ಬಂದಿ ಸೇರಿದಂತೆ ಎಲ್ಲ 166 ಮಂದಿಯೂ ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕೌಲಾಲಂಪುರದಿಂದ ಬೀಜಿಂಗ್‌ಗೆ ತೆರಳಬೇಕಿದ್ದ ಎಂಎಚ್ 370 ವಿಮಾನ ಮಾರ್ಗ ಮಧ್ಯದಲ್ಲಿ ಕಣ್ಮರೆಯಾದ ದುರಂತ ಇನ್ನೂ ಮಾಸದಿರುವ ಮುನ್ನವೇ ಈ ವಿಮಾನದ ಸುರಕ್ಷತೆ ಬಗ್ಗೆ ಆತಂಕದ ಕಾರ್ಮೋಡ ಕವಿದಿತ್ತು.
 
ಮಲೇಷ್ಯಾ ಏರ್‌ಲೈನ್ಸ್ ವಿಮಾನದ ಲ್ಯಾಂಡಿಂಗ್ ಗೇರ್ ದೋಷದಿಂದ ವಿಮಾನದಲ್ಲಿದ್ದ ಪ್ರಯಾಣಿಕರು ಮೂರು ಗಂಟೆಗಳ ಕಾಲ ತೀವ್ರ ಆತಂಕಕ್ಕೆ ಒಳಗಾದರು. 159 ಪ್ರಯಾಣಿಕರಿದ್ದ ವಿಮಾನ ಮೇಲೆ ಹಾರುತ್ತಿದ್ದಂತೆ ಟೈರ್ ಸ್ಫೋಟಗೊಂಡ ದೊಡ್ಡ ಶಬ್ದವೊಂದು ಕೇಳಿತು. ವಿಮಾನವು ಅಲುಗಾಡತೊಡಗಿತು. ತಾಂತ್ರಿಕ ದೋಷದಿಂದ ವಿಮಾನ ವಾಪಸು ಕೌಲಾಲಂಪುರಕ್ಕೆ ಹೋಗುತ್ತದೆಂದು ನಮಗೆ ತಿಳಿಸಲಾಯಿತು. ಲ್ಯಾಂಡಿಂಗ್ ಗೇರ್‌ನಲ್ಲಿ ದೋಷವುಂಟಾಗಿದೆ ಎಂದು ನಂತರ ತಿಳಿಸಿದರು. ವಿಮಾನವು  ಲ್ಯಾಂಡಿಂಗ್ ಮುಂಚೆ ಇಂಧನವನ್ನು ಖರ್ಚು ಮಾಡಲು ಪೈಲಟ್‌ಗಳು ಬಯಸಿದ್ದರಿಂದ ಮೂರು ಗಂಟೆಗಳ ಕಾಲ ಆಕಾಶದಲ್ಲಿ ಹಾರಾಡಿತು ಎಂದು ನಗರದ ವೈದ್ಯೆ ಸ್ವಾತಿ ನಿಲ್ದಾಣದಲ್ಲಿ ವರದಿಗಾರರಿಗೆ ತಮ್ಮ ನೆನಪುಗಳನ್ನು ಮೆಲಕು ಹಾಕಿದ್ದಾರೆ.

ಸುಮಾರು ಮೂರು ಗಂಟೆಗಳ ಕಾಲ ವಿಮಾನ ಸುತ್ತು ಹಾಕಿದ ಬಳಿಕ ಪ್ರಯಾಣಿಕರಿಗೆ ತಲೆ ಕೆಳಗೆ ಮಾಡಿ ಸೀಟುಗಳಲ್ಲಿ ಕುಳಿತುಕೊಳ್ಳುವಂತೆ ತಿಳಿಸಲಾಯಿತು.ಮೂರನೇ ಪ್ರಯತ್ನದಲ್ಲಿ ಪೈಲಟ್ ಯಶಸ್ವಿಯಾಗಿ ಲ್ಯಾಂಡ್ ಮಾಡಿದಾಗ ನಾವು ನಿಟ್ಟಿಸಿರುಬಿಟ್ಟು, ಪೈಲಟ್‌ಗಳಿಗೆ ಧನ್ಯವಾದ ಸೂಚಿಸಿದ್ದಾಗಿ ಸ್ವಾತಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ