ಮನೆ ಕಳೆದುಕೊಂಡ ವ್ಯಕ್ತಿಯಿಂದ ಕಾರಿನೊಳಗೆ 15 ವರ್ಷ ಒಂಟಿ ಜೀವನ

ಸೋಮವಾರ, 1 ಫೆಬ್ರವರಿ 2016 (19:35 IST)
ಸುಳ್ಯದಲ್ಲಿ ಕಳೆದ 15 ವರ್ಷಗಳಿಂದ ವ್ಯಕ್ತಿಯೊಬ್ಬ ತನ್ನ ಕಾರನ್ನು ಮನೆಯ ರೀತಿ ಮಾಡಿಕೊಂಡು ಅದರಲ್ಲೇ ವಾಸಿಸುತ್ತಿದ್ದ ಸಂಗತಿ ಬೆಳಕಿಗೆ ಬಂದಿದೆ. ಮನೆಯನ್ನು ಕಳೆದುಕೊಂಡಿದ್ದ ವ್ಯಕ್ತಿಗೆ ಗಾಳಿ, ಬಿಸಿಲಿನಿಂದ ರಕ್ಷಣೆ ನೀಡಿ ಸೂರು ಒದಗಿಸಿದ್ದು ಅವನು ಖರೀದಿಸಿದ್ದ ಫಿಯೆಟ್ ಕಾರು.   ನೂಜಾಲುವಿನ ಚಂದ್ರಶೇಖರ್ ಗೌಡ ಸಹಕಾರಿ ಸಂಘದ ಸಾಲ ತೀರಿಸಲು ವಿಫಲರಾದ್ದರಿಂದ ಅವರ ಎರಡು ಎಕರೆ ಭೂಮಿ ಮತ್ತು ಮನೆಯನ್ನು ಕಳೆದುಕೊಂಡಿದ್ದರು.
 
1999ರಲ್ಲಿ ನೆಲ್ಲೂರು ಸಹಕಾರಿ ಸಂಘದಿಂದ 50,400 ರೂ. ಅಲ್ಪಾವಧಿ ಸಾಲ ಮತ್ತು ಬೆಳೆ ಸಾಲ ತೆಗೆದುಕೊಂಡಿದ್ದರು. ಸಾಲ ಮರುಪಾವತಿಗೆ ವಿಫಲರಾದಾಗ ಅವರ 2.29 ಎಕರೆ ಭೂಮಿಯನ್ನು 2002ರಲ್ಲಿ ಸಹಕಾರಿ ಸಂಘ 1.2 ಲಕ್ಷ ರೂ.ಗೆ ಮಾರಾಟ ಮಾಡಿತ್ತು.. ಚಂದ್ರಶೇಖರ್ ಪಾವತಿ ಮಾಡಬೇಕಾದ ಹಣ ಮುರಿದುಕೊಂಡು ಅವರಿಗೆ ನೀಡಬೇಕಾಗಿದ್ದ ಮೊತ್ತವಾದ 11000 ರೂ.ಗಳನ್ನು ಚಂದ್ರಶೇಖರ್ ಸ್ವೀಕರಿಸಲೇ ಇಲ್ಲ. 
 
2003ರಲ್ಲಿ ಪೊಲೀಸರ ನೆರವಿನಿಂದ ಅವರನ್ನು ಖಾಲಿ ಮಾಡಿಸಿ ಮನೆಯನ್ನು ನೆಲಸಮ ಮಾಡಲಾಯಿತು. ಕೆಲವು ಕಾಲ ಸೋದರಿಯ ಮನೆಯಲ್ಲಿ ತಂಗಿದ್ದ ಚಂದ್ರಶೇಖರ್ ಸುಳ್ಯದ ವಕೀಲರಿಂದ ಕಾರೊಂದನ್ನು ಖರೀದಿಸಿ ಅರಂತೋಡು ಬೇದ್ರುಪನೆ ಅರಣ್ಯ ತುದಿಯಲ್ಲಿ ಕಾರ್ ಪಾರ್ಕ್ ಮಾಡಿ ಅದನ್ನೇ ಮನೆಯನ್ನಾಗಿಸಿ ವಾಸಿಸತೊಡಗಿದರು.

ಜೀವನೋಪಾಯಕ್ಕಾಗಿ ಬುಟ್ಟಿಗಳನ್ನು ಹೆಣೆಯುತ್ತಿದ್ದ ಅವರು 21 ಕಿಮೀ ದೂರ ಸುಳ್ಯಕ್ಕೆ ಪ್ರಯಾಣಿಸಿ ಬುಟ್ಟಿ ಮಾರಾಟ ಮಾಡುತ್ತಿದ್ದರು. ಸ್ಥಳೀಯ ಮಾಧ್ಯಮದ ಮೂಲಕ ಚಂದ್ರಶೇಖರ್ ಕಥೆ ಬೆಳಕಿಗೆ ಬಂದ ಮೇಲೆ ಉಪ ಆಯುಕ್ತ ಇಬ್ರಾಹಿಂ ವಿಶೇಷ ಆಸಕ್ತಿ ವಹಿಸಿ ಚಂದ್ರಶೇಖರ್ ಅವರನ್ನು ಭೇಟಿ ಮಾಡಿದಾಗ ತಮ್ಮ ಭೂಮಿಯನ್ನು ಹರಾಜು ಮಾಡಿದ ವಿಧಾನದಲ್ಲಿ ಅನ್ಯಾಯವಾಗಿದೆ ಎಂದು ತಿಳಿಸಿದರು. ಕಳೆದ 15 ವರ್ಷಗಳಿಂದ ಕಾಡಿನಲ್ಲಿ ಒಂಟಿಯಾಗಿ ಜೀವಿಸಿದ್ದರಿಂದ ಅವರು ಮಾನಸಿಕ ಕ್ಷೋಬೆಗೆ ಒಳಗಾಗಿದ್ದಾರೆಂದು ವೈದ್ಯರು ತಿಳಿಸಿದ್ದು, ಕೆಲವು ಪರೀಕ್ಷೆಗೆ ಒಳಪಡುವುದಕ್ಕೆ  ಅವರಿಗೆ ಸೂಚಿಸಿದ್ದಾರೆ.
 
 ಚಂದ್ರಶೇಖರ್ ತಮಗೆ ಅನ್ಯಾಯವಾಗಿದೆಯೆಂದು ಹೇಳಿದ್ದರಿಂದ ಸರ್ಕಾರದ ವತಿಯಿಂದ ಚಂದ್ರಶೇಖರ್ ಅವರ ಪರ ಉಚಿತ ವಕಾಲತ್ತಿಗೆ ವ್ಯವಸ್ಥೆ ಮಾಡಿ ಸಹಕಾರಿ ಸಂಘದ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಡಿಸಿ ಇಬ್ರಾಹಿಂ ಹೇಳಿದ್ದಾರೆ. 
 
 

ವೆಬ್ದುನಿಯಾವನ್ನು ಓದಿ