ಸೂಕ್ತ ಬೆಲೆ ಇಲ್ಲವೆಂದು 1 ಎಕರೆ ಕಬ್ಬು ನಾಶಗೊಳಿಸಿದ ಮಂಡ್ಯ ರೈತ

ಸೋಮವಾರ, 6 ಜುಲೈ 2015 (11:30 IST)
ಕಬ್ಬಿಗೆ ಸೂಕ್ತ ಬೆಲೆ ಸಿಗಲಿಲ್ಲ ಹಾಗೂ ಬಾಕಿ ಹಣ ವಾಪಾಸಾತಿಯಾಗಿಲ್ಲ ಎಂದು ಮನನೊಂದ ರೈತನೋರ್ವ ತಮ್ಮ ಒಂದು ಎಕರೆ ಜಮೀನಿನಲ್ಲಿ ಬೆಳೆದಿದ್ದ ಕಬ್ಬನ್ನು ಟ್ರ್ಯಾಕ್ಟರ್ ಹರಿ ಬಿಡುವ ಮೂಲಕ ತಾನೇ ನಾಶಗೊಳಿಸಿರುವ ಮನಕಲಕುವ ಘಟನೆ ಜಿಲ್ಲೆಯ ಮದ್ದೂರು ತಾಲೂಕಿನ ಉಪ್ಪಿನಕೆರೆ ಗ್ರಾಮದಲ್ಲಿ ನಡೆದಿದೆ. 
 
ತನ್ನ ಕಬ್ಬಿನ ಬೆಳೆಯನ್ನು ನಾಶಗೊಳಿಸಿದ ರೈತನನ್ನು ಉಮೇಶ್(50) ಎಂದು ಹೇಳಲಾಗಿದ್ದು, ಕಳೆದ ವರ್ಷ ಸಕ್ಕರೆ ಕಾರ್ಖಾನೆಗೆ ಕಬ್ಬು ರವಾನೆ ಮಾಡಿದ್ದ. ಆದರೆ ಆ ಬಾಕಿ ಹಣ ಇನ್ನೂ ಹಿಂದಿರುಗಿರಲಿಲ್ಲ. ಅಲ್ಲದೆ ಈ ಬಾರಿಯೂ ಕೂಡ ನಾಲ್ಕು ಲಕ್ಷ ಸಾಲ ಮಾಡಿ ಕಬ್ಬು ಬೆಳೆದಿದ್ದ. ಆದರೆ ಸರ್ಕಾರದಿಂದ ಸೂಕ್ತ ಬೆಲೆ ಸಿಗುತ್ತಿಲ್ಲ ಎಂದು ಬೇಸರಗೊಂಡ ರೈತ, ಬೆಳೆದು ನಿಂತಿದ್ದ ಬೆಳೆಯನ್ನು ಸಂಪೂರ್ಣವಾಗಿ ಟ್ರ್ಯಾಕ್ಟರ್ ಹರಿಬಿಡುವ ಮೂಲಕ ನಾಶಗೊಳಿಸಿದ್ದಾನೆ. 
 
ಮಾಧ್ಯಮಗಳೊಂದಿಗೆ ಮಾತನಾಡಿದ ರೈತ ರಾಜ್ಯದ ವಸತಿ ಸಚಿವ ಅಂಬರೀಶ್ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ರೈತರನ್ನು ನಿರ್ಲಕ್ಷಿಸುತ್ತಿರುವ ಸರ್ಕಾರದ ಕಾರ್ಯ ವೈಖರಿಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾನೆ.

ವೆಬ್ದುನಿಯಾವನ್ನು ಓದಿ