ಕರ್ನಾಟಕ ಮಾದರಿಯಲ್ಲಿ ಮಾರುಕಟ್ಟೆ ನಿರ್ಮಾಣ: ಸಂಪುಟ ಅನುಮೋದನೆ

ಗುರುವಾರ, 2 ಜುಲೈ 2015 (14:21 IST)
ಇ-ನಿಯಂತ್ರಿತ ಆನ್‌ಲೈನ್ ರಾಷ್ಟ್ರೀಯ ಮಾರುಕಟ್ಟೆಗಳನ್ನು ರಾಷ್ಟ್ರಾದ್ಯಂತ ನಿರ್ಮಿಸಲು ಕೇಂದ್ರ ಸಚಿವ ಸಂಪುಟ ಇಂದು ಒಪ್ಪಿಗೆ ಸೂಚಿಸಿದ್ದು, ಇದಕ್ಕೆ ಕರ್ನಾಟಕ ಮಾರುಕಟ್ಟೆ ವ್ಯವಸ್ಥೆಯನ್ನು ಮಾದರಿಯನ್ನಾಗಿಸಿಕೊಳ್ಳಲಾಗಿದೆ.   
 
ಮಾರುಕಟ್ಟೆ ನಿರ್ಮಾಣ ಸಂಬಂಧ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಇಂದು ಸಂಪುಟ ಸಭೆ ನಡೆಸಿದ್ದು, ಈ ಸಂಬಂಧ ಒಮ್ಮತ ನಿರ್ಣಯ ವ್ಯಕ್ತವಾದ ಹಿನ್ನೆಲೆಯಲ್ಲಿ ಅನುಮೋದನೆ ಸಿಕ್ಕಿದೆ. 
 
ಈ ಯೋಜನೆ ಅಡಿಯಲ್ಲಿ ರಾಷ್ಟ್ರಾದ್ಯಂತ 585 ಮಾರುಕಟ್ಟೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದ್ದು, 200 ಕೋಟಿ ರೂ. ಮೀಸಲಿಡಲಾಗಿದೆ. ಪ್ರತಿ ಮಾರಕಟ್ಟೆಗೆ 30 ಲಕ್ಷ ರೂ. ಅನುದಾನ ನೀಡಲಿದ್ದು, ಮಾರುಕಟ್ಟೆಗಳು ಶೀಘ್ರದಲ್ಲಿಯೇ ತಲೆ ಎತ್ತಲಿವೆ. 
 
ಈ ಸಂಬಂಧ ಅಧ್ಯಯನ ನಡೆಸಲೆಂದು ಕೇಂದ್ರ ಕೃಷಿ ಸಚಿವ ರಾಧಾಮೋಹನ್ ಸಿಂಗ್ ಅವರು ಜುಲೈ 8 ಮತ್ತು 9ರಂದು ರಾಜ್ಯದ ಹುಬ್ಬಳ್ಳಿ ನಗರಕ್ಕೆ ಆಗಮಿಸಲಿದ್ದು, ಅಧ್ಯಯನ ನಡೆಸಲಿದ್ದಾರೆ. ಈ ವೇಳೆ ಸಚಿವರೊಂದಿಗೆ ಇತರೆ ರಾಜ್ಯಗಳ ಕೃಷಿ ಇಲಾಖೆಯ ಉನ್ನತಾಧಿಕಾರಿಗಳೂ ಕೂಡ ಆಗಮಿಸಿ ಅಧ್ಯಯನ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
 
ರೈತರ ಉತ್ಪನ್ನಗಳಿಗೆ ಸೂಕ್ತ ಹಾಗೂ ನ್ಯಾಯಯುತ ಬೆಲೆ ಒದಗಿಸುವ ಹಾಗೂ ದಲ್ಲಾಳಿಗಳ ಹಾವಳಿಯಿಂದ ರೈತರನ್ನು ಮುಕ್ತಗೊಳಿಸುವ ಉದ್ದೇಶದಿಂದ ಕರ್ನಾಟಕದಲ್ಲಿ ಆನ್‌ಲೈನ್ ಮಾರಾಟ ವ್ಯವಸ್ಥೆ ಅಳವಡಿಸಲಾಗಿದ್ದು, ಸಾಕಷ್ಟು ಮಾಹಿತಿ ತಂತ್ರಜ್ಞಾನವನ್ನು ಬಳಸಿಕೊಂಡು ಅಭಿವೃದ್ಧಿಪಡಿಸಲಾಗಿದೆ. ಇದರಿಂದ ಮಾರುಕಟ್ಟೆ ಆಡಳಿತ ಪಾರದರ್ಶಕವಾಗಿ, ಸುಗಮ ರೀತಿಯಲ್ಲಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸ್ರಕಾರ ರಾಜ್ಯದ ಮಾರುಕಟ್ಟೆ ಮಾದರಿಯನ್ನು ಅಳವಡಿಸಿಕೊಂಡಿದೆ.

ವೆಬ್ದುನಿಯಾವನ್ನು ಓದಿ