ಪ್ರಮುಖ ರಸ್ತೆಯೊಂದಕ್ಕೆ ಹುತಾತ್ಮ ಕೊಪ್ಪದ್ ಹೆಸರು

ಶುಕ್ರವಾರ, 12 ಫೆಬ್ರವರಿ 2016 (12:08 IST)
ನಿನ್ನೆ ರಾತ್ರಿ ಹುತಾತ್ಮ ಯೋಧ ಸಿಯಾಚಿನ್ ಹೀರೋ ಹನುಮಂತಪ್ಪ ಕೊಪ್ಪದ ಅವರ ಪಾರ್ಥಿವ ಶರೀರವನ್ನು ಬರಮಾಡಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರದ ಚೆಕ್‌‌ ವಿತರಿಸಿದ್ದಾರೆ. 

ಹುಬ್ಬಳ್ಳಿ ಏರ್‌ಪೋರ್ಟ್‌ನಲ್ಲಿ ಕೊಪ್ಪದ ಅವರಿಗೆ ಅಂತಿಮ ನಮನ ಸಲ್ಲಿಸಿದ್ದ ಸಿಎಂ ಬಳಿಕ ಮತ್ತೊಮ್ಮೆ ಕಿಮ್ಸ್‌‌ ಆಸ್ಪತ್ರೆಯಲ್ಲಿ ಕೂಡ ಅಂತಿಮ ದರ್ಶನ ಪಡೆದರು. ಬಳಿಕ ಕೊಪ್ಪದ ಅವರ ಕುಟುಂಬ ಸದಸ್ಯರಿಗೆ 25 ಲಕ್ಷ ರೂಪಾಯಿಯ ಚೆಕ್ ವಿತರಿಸಿದರು.
 
ಚೆಕ್‌ ವಿತರಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಅವರು ಕೊಪ್ಪದ ಅವರ ಹೆಸರನ್ನು ಹುಬ್ಬಳ್ಳಿ ನಗರದ ಪ್ರಮುಖ ರಸ್ತೆಯೊಂದಕ್ಕೆ ಇಡಲಾಗುವುದು. ಈ ಕುರಿತು ಜಿಲ್ಲಾಡಳಿತಕ್ಕೆ ಈಗಾಗಲೇ ಸೂಚನೆ ನೀಡಿದ್ದೇನೆ. ಯೋಧನ ಪತ್ನಿ ಮಹಾದೇವಿ ಅವರಿಗೆ ಸರ್ಕಾರಿ ನೌಕರಿ, 4 ಎಕರೆ ಜಮೀನು, 1 ನಿವೇಶನ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ. 
 
ಇನ್ನಿಬ್ಬರು ಹುತಾತ್ಮ ಯೋಧರ ಕುಟುಂಬಕ್ಕೂ ಸಹ ಶೀಘ್ರದಲ್ಲಿ ಪರಿಹಾರವನ್ನು ನೀಡಲಾಗುವುದು ಎಂದು ಸಿಎಂ ಹೇಳಿದ್ದಾರೆ. 
 
ಸಿಯಾಚಿನ್ ಹಿಮಪಾತದಲ್ಲಿ ಕರ್ನಾಟಕದ ಮೂವರು ಸೇರಿದಂತೆ 10 ಜನ ಸಿಕ್ಕಿ ಹಾಕಿಕೊಂಡಿದ್ದರು. ಅದರಲ್ಲಿ 9 ಜನ ಅಲ್ಲೇ ಮೃತಪಟ್ಟಿದ್ದರೆ, ಹನುಮಂತಪ್ಪ ಕೊಪ್ಪದ್ ಪವಾಡಸದೃಶವಾಗಿ ಬದುಕಿಳಿದು ಬಳಿಕ ಆಸ್ಪತ್ರೆಯಲ್ಲಿ ಹುತಾತ್ಮರಾಗಿದ್ದರು. ಮೈಸೂರು ಜಿಲ್ಲೆ ಎಚ್‌.ಡಿ.ಕೋಟೆ ತಾಲೂಕಿನ ಯೋಧ ಪಿ.ಎನ್‌. ಮಹೇಶ್‌ ಹಾಗೂ ಹಾಸನದ ತೇಜೂರು ಗ್ರಾಮದ ಟಿ.ಟಿ.ನಾಗೇಶ್‌ ಅವರ ಮೃತದೇಹಗಳು ಇನ್ನೂ ಕುಟುಂಬದವರಿಗೆ ಲಭ್ಯವಾಗಿಲ್ಲ. 
 
 

ವೆಬ್ದುನಿಯಾವನ್ನು ಓದಿ