ಮೇಯರ್ ಆಯ್ಕೆ ವಿಚಾರ: ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ವಿಚಾರಣೆ

ಮಂಗಳವಾರ, 1 ಸೆಪ್ಟಂಬರ್ 2015 (17:38 IST)
ಬಿಬಿಎಂಪಿ ಮೇಯರ್ ಆಯ್ಕೆ ವಿಷಯಕ್ಕೆ ಸಂಬಂಧಿಸಿದಂತೆ ಪಾಲಿಕೆಯ ಬಿಜೆಪಿ ನೂತನ ಸದಸ್ಯರು ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಇಂದು ನಡೆಸಿದ್ದು, ಮೇಯರ್ ಆಯ್ಕೆಗೆ ಚುನಾವಣೆ ಯಾವಾಗ ಎಂದು ಸರ್ಕಾರವನ್ನು ಪ್ರಶ್ನಿಸಿದೆ.
 
ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ಕೋರ್ಟ್, ಚುನಾವಣೆ ನಡೆದು ಫಲಿತಾಂಶವೂ ಬಂದಾಯಿತು. ಆದರೆ ಇನ್ನೂ ಕೂಡ ಮೇಯರ್ ಆಯ್ಕೆಯಾಗಿಲ್ಲ. ಈ ಸಂಬಂಧ ಚುನಾವಣೆ ಯಾವಾಗ ಎಂದು ಸರ್ಕಾರದ ಅಡ್ವೋಕೇಟ್ ಜನರಲ್ ಅವರನ್ನು ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ಎಜಿ ಪ್ರೊ.ರವಿ ವರ್ಮಕುಮಾರ್, ಸೆ. 11ಕ್ಕೆ ಚುನಾವಣೆ ನಡೆಯಲಿದ್ದು, ಸಂವಿಧಾನ ಬದ್ಧವಾಗಿಯೇ ಆರಿಸಲಾಗುತ್ತದೆ ಎಂದು ಉತ್ತರಿಸಿದರು. 
 
ಇದೇ ವೇಳೆ, ಜಿಲ್ಲಾ ಪಂಚಾಯತ್‌ನಲ್ಲಿ ಮತ ಚಲಾಯಿಸುವ ಹಕ್ಕನ್ನು ಶಾಸಕರು ಹೊಂದಿಲ್ಲ. ಆದರೆ ಪಾಲಿಕೆ ಚುನಾವಣೆಯಲ್ಲಿ ಮಾತ್ರ ಈ ನಿಯಮವಿದೆ, ಏಕೆ ಎಂಬ ಕೋರ್ಟ್ ಪ್ರಶ್ನೆಗೆ ಉತ್ತರಿಸಿದ ಅವರು, ಈ ನಿಯಮವು ಕಳೆದ 22 ವರ್ಷಗಳಿಂದಲೂ ಕೂಡ ಅಸ್ತಿತ್ವದಲ್ಲಿದ್ದು, ಸರ್ಕಾರಕ್ಕೆ ಕಾನೂನು ರಚಿಸುವ ಅಧಿಕಾರವಿದೆ. ಅಲ್ಲದೆ ಈ ಹಿಂದೆ ಆಡಳಿತ ನಡೆಸಿದ್ದ ಬಿಜೆಪಿ ಕೂಡ ಈ ಕಾಯಿದೆಯ ಲಾಭ ಪಡೆದಿದೆ ಎಂದರು. ಇದಕ್ಕೆ ಅರ್ಜಿದಾರರ ವಕೀಲರು ವಿರೋಧ ವ್ಯಕ್ತಪಡಿಸಿದ ಕಾರಣ ಕೋರ್ಟ್, ಸಂವಿಧಾನ ಬದ್ಧವಾಗಿ ವಾದ ಮಂಡಿಸಲು ಎಜಿ ಅವರಿಗೆ ಸೂಚಿಸಿತು.  
 
ಬಳಿಕ, ಇತ್ತೀಚೆಗೆ ನಗರಪಾಲಿಕೆಗಳ ಚುನಾವಣೆಯಲ್ಲಿ ಮತ ಚಲಾಯಿಸುವ ಹಕ್ಕು ಶಾಸಕರಿಗಿಲ್ಲ ಎಂದು ಹೈಕೋರ್ಟ್ ಇತ್ತೀಚೆಗೆ ನೀಡಿದ ತೀರ್ಪಿನ ಸಂಬಂಧ ಈಗಾಗಲೇ ಮೇಲ್ಮನವಿ ಸಲ್ಲಿಕೆಯಾಗಿದೆ ಎಂದೂ ಕೂಡ ರವಿ ವರ್ಮಕುಮಾರ್ ವಾದ ಮಂಡಿಸಿದರು. 

ವೆಬ್ದುನಿಯಾವನ್ನು ಓದಿ