ಕರ್ನಾಟಕ ಬಂದ್ : ತಮಿಳುನಾಡು ಧೋರಣೆ ಖಂಡಿಸಿ ವ್ಯಾಪಕ ಪ್ರತಿಭಟನೆ

ಶನಿವಾರ, 18 ಏಪ್ರಿಲ್ 2015 (11:47 IST)
ಮೇಕೆದಾಟು ಯೋಜನೆ ವಿರುದ್ಧ ತಮಿಳುನಾಡು ಸರ್ಕಾರದ ಧೋರಣೆ ಖಂಡಿಸಿ ಕನ್ನಡ ಪರ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಬೆಂಗಳೂರಿನಲ್ಲಿ ಕನ್ನಡ ಪರ ಸಂಘಟನೆಗಳು  ಬೈಕ್ ರಾಲಿಗಳು ಮತ್ತು ಕಾಲ್ನಡಿಗೆಯ ಜಾಥಾ ನಡೆಸಿದ್ದಾರೆ. ಎಲ್ಲಾ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಟೌನ್ ಹಾಲ್ ಬಳಿ ಬಂದು ಸೇರುತ್ತಿದ್ದು, ಇನ್ನು ಸ್ವಲ್ಪ ಹೊತ್ತಿನಲ್ಲೇ ಪ್ರತಿಭಟನಾ ಮೆರವಣಿಗೆ ಆರಂಭವಾಗುತ್ತದೆ.

 ವಾಟಾಳ್  ನಾಗರಾಜ್  ಟೌನ್ ಹಾಲ್ ಬಳಿಗೆ ಸೈಕಲ್ ಏರಿ  ಆಗಮಿಸಿದಾಗ ಅವರ ಬೆಂಬಲಿಗರು ಅವರ ಹಿಂದೆಯೇ ಓಡಿಬಂದರು. ಕರವೇ ಕಾರ್ಯಕರ್ತರು ಮೇಕ್ರಿವೃತ್ತದಿಂದ ಟೌನ್‌ಹಾಲ್‌ಗೆ ಆಗಮಿಸಿದ್ದಾರೆ. ಸ್ಯಾಂಡಲ್ ವುಡ್ ತಂತ್ರಜ್ಞರು ಗಾಂಧಿನಗರದಿಂದ ಆಗಮಿಸಿದ್ದಾರೆ. ಟೌನ್‌ಹಾಲ್‌ನಿಂದ ಆರಂಭವಾಗುವ ಮೆರವಣಿಗೆ ಫ್ರೀಡಂಪಾರ್ಕ್‌ನಲ್ಲಿ ಮುಕ್ತಾಯವಾಗುತ್ತದೆ. ನಂತರ ಸಿಎಂ ಸಿದ್ದರಾಮಯ್ಯ ಅವರ ಬಳಿಗೆ ಒಂದು ನಿಯೋಗ ತೆರಳಿ ಮನವಿ ಸಲ್ಲಿಸಲಿದೆ. 

 ಈ ಸಂದರ್ಭದಲ್ಲಿ ಮೇಕೆದಾಟು ಯೋಜನೆಯನ್ನು ವಿರೋಧಿಸುತ್ತಿರುವ ತಮಿಳುನಾಡು ಸರ್ಕಾರದ ಧೋರಣೆಗೆ  ವ್ಯಾಪಕ ಖಂಡನೆ ವ್ಯಕ್ತವಾಗಿದೆ. ತಮಿಳುನಾಡು ಸಿಎಂ ಅಣಕು ಶವಯಾತ್ರೆ ನಡೆಸಿ ಕಾರ್ಯಕರ್ತರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ತಮಿಳುನಾಡು ಸರ್ಕಾರಕ್ಕೆ ಧಿಕ್ಕಾರದ ಘೋಷಣೆಗಳನ್ನು ಅವರು ಕೂಗಿದರು.  ರಾಮನಗರದಲ್ಲಿ ತಮಿಳುನಾಡು ವಿರುದ್ಧ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಇವರ ಪ್ರತಿಭಟನೆಯಲ್ಲಿ ಮೇಕೆಗಳನ್ನು ಕರೆತಂದು ಮೇಕೆದಾಟು ಯೋಜನೆಯನ್ನು ಜಾರಿಗೆ ತರಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.  

ವೆಬ್ದುನಿಯಾವನ್ನು ಓದಿ