ಮೇಕೆದಾಟು ಯೋಜನೆ ವಿಳಂಬ: ಏ.18ಕ್ಕೆ ಕರ್ನಾಟಕ ಬಂದ್

ಮಂಗಳವಾರ, 31 ಮಾರ್ಚ್ 2015 (15:58 IST)
ಮೇಕೆದಾಟು ಯೋಜನೆಯನ್ನು ಜಾರಿಗೊಳಿಸುವಲ್ಲಿ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದ್ದು, ಸರ್ಕಾರದ ಕ್ರಮವನ್ನು ಖಂಡಿಸಿರುವ ಕನ್ನಡ ಪರ ಸಂಘಟನೆಗಳು ಏಪ್ರಿಲ್ 18ರಂದು ಕರ್ನಾಟಕ ಬಂದ್‌ಗೆ ಕರೆ ನೀಡಿವೆ.
 
ಈ ಬಂದ್‌ನ ನೇತೃತ್ವವನ್ನು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ವಹಿಸಿದ್ದು, ನಗರದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿ, ಸರ್ಕಾರ ಮೇಕೆದಾಟು ಯೋಜನೆಯಲ್ಲಿ ನಿರ್ಲಕ್ಷ್ಯ ವಹಿಸಿದೆ. ಸರ್ಕಾರ ಸಾರ್ವಜನಿಕರಿಗೆ ಕೇವಲ ಆಶ್ವಾಸನೆಗಳನ್ನು ಮಾತ್ರ ನೀಡುತ್ತಿದ್ದು, ಅದನ್ನು ಈಡೇರಿಸುವಲ್ಲಿ ಕಾಲಾಹರಣ ಮಾಡುತ್ತಿದೆ ಎಂದು ಆರೋಪಿಸಿದ ಅವರು, ನಿರ್ಲಕ್ಷ್ಯ ಕ್ರಮವನ್ನು ಖಂಡಿಸಿ ಏಪ್ರಿಲ್ 18ರಂದು ರಾಜ್ಯಾದ್ಯಂತ ಬಂದ್ ಘೋಷಿಸಲಾಗಿದೆ ಎಂದರು. 
 
ಇನ್ನು ಈ ಬಂದ್‌ನಲ್ಲಿ ಶಿವರಾಮೇಗೌಡ ಅವರ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆ, ರಾಜ್ ಕುಮಾರ್ ಅಭಿಮಾನಿಗಳ ಸಂಘ, ಸಾ.ರಾ.ಗೋವಿಂದು ನೇತೃತ್ವದ ಕನ್ನಡ ಚಳುವಳಿ ವಾಟಾಳ್ ಪಕ್ಷ ಸೇರಿದಂತೆ ಇನ್ನಿತರೆ ಕನ್ನಡ ಪರ ಸಂಘಟನೆಗಳು ಪಾಲ್ಗೊಳ್ಳಲಿವೆ ಎನ್ನಲಾಗಿದೆ. 
 
ಇದೇ ವೇಳೆ ಮಾತನಾಡಿದ ರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಗೋವಿಂದು, ಏಪ್ರಿಲ್ ನಾಲ್ಕರಂದು ಬೆಂಗಳೂರಿನಿಂದ ಮೇಕೆದಾಟು ವರೆಗೆ ಪ್ರತಿಭಟನಾ ರ್ಯಾಲಿಯನ್ನು ಹಮ್ಮಿಕೊಂಡು ಸರ್ಕಾರಕ್ಕೆ ಯೋಜನೆ ಜಾರಿಗೊಳಿಸುವಂತೆ ಎಚ್ಚರಿಕೆಯನ್ನು ರವಾನಿಸಲಾಗುವುದು ಎಂದರು.  

ವೆಬ್ದುನಿಯಾವನ್ನು ಓದಿ