ವಿಧಾನ ಪರಿಷತ್‌ಗೆ ಪ್ರತಿಪಕ್ಷ ನಾಯಕನ ರೇಸ್‌ನಲ್ಲಿ ಈಶ್ವರಪ್ಪ

ಸೋಮವಾರ, 19 ಮೇ 2014 (14:51 IST)
ವಿಧಾನ ಪರಿಷತ್‌ಗೆ ಪ್ರತಿಪಕ್ಷ ನಾಯಕರನ್ನು ನೇಮಿಸುವ ಬಗ್ಗೆ ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.
 
ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಅವರು ಲೋಕಸಭೆಗೆ ಹೋಗುತ್ತಿರುವುದರಿಂದ ವಿಧಾನ ಪರಿಷತ್‌ನಲ್ಲಿ ಪ್ರತಿಪಕ್ಷ ಸ್ಥಾನ ತೆರವಾಗುತ್ತಿದೆ. ಅವರ ಪರಿಷತ್ ಸದಸ್ಯತ್ವದ ಅವಧಿ ಕೂಡ ಇದೇ ಜೂನ್‌ಗೆ ಮುಗಿಯುತ್ತಿದೆ. ಹೀಗಾಗಿ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರ ಹೆಸರು ಮುಂಚೂಣಿಯಲ್ಲಿದ್ದು, ಮಾಜಿ ಸಚಿವ ವಿ.ಸೋಮಣ್ಣ ಕೂಡ ಲಾಬಿ ನಡೆಸುತ್ತಿದ್ದಾರೆ. ಆದರೆ, ಈಶ್ವರಪ್ಪ ಮೊದಲು ವಿಧಾನಪರಿಷತ್ ಸದಸ್ಯರಾಗಬೇಕಿದೆ.
 
ಜೂನ್‌ನಲ್ಲಿ ನಡೆಯುವ ಚುನಾವಣೆಯಲ್ಲಿ ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಕೇವಲ ಒಬ್ಬ ಸದಸ್ಯರನ್ನು ಮಾತ್ರ ಆಯ್ಕೆ ಮಾಡಿ ಕಳುಹಿಸಲು ಬಿಜೆಪಿಗೆ ಅವಕಾಶವಿದೆ. ಈ ಹಿನ್ನೆಲೆಯಲ್ಲಿ ವಿಧಾನಸಭೆಯಿಂದ ಆಯ್ಕೆಯಾಗುವ ಅಭ್ಯರ್ಥಿಯೇ ಪ್ರತಿಪಕ್ಷ ನಾಯಕರಾಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.
 
ಈ ಸ್ಥಾನಕ್ಕೆ ಈಶ್ವರಪ್ಪ ಅವರು ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷರಾಗಿದ್ದ ಅವರು ಪ್ರಸ್ತುತ ಯಾವುದೇ ಜವಾಬ್ದಾರಿ ಹೊಂದಿಲ್ಲ. ಈಶ್ವರಪ್ಪ ಅವರನ್ನು ವಿಧಾನ ಪರಿಷತ್‌ಗೆ ಕಳುಹಿಸಿ ಪ್ರತಿಪಕ್ಷ ನಾಯಕ ಸ್ಥಾನದಲ್ಲಿ ಕೂರಿಸಲು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಒಲವು ತೋರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದಕ್ಕೆ ರಾಜ್ಯ ಬಿಜೆಪಿ ಕೂಡ ಸಮ್ಮತಿ ಸೂಚಿಸಿದೆ.
 
ವಿಧಾನಸಭೆಯಲ್ಲಿ ಲಿಂಗಾಯತ ಸಮುದಾಯಕ್ಕೆ ಸೇರಿದ ಜಗದೀಶ್ ಶೆಟ್ಟರ್ ಪ್ರತಿಪಕ್ಷ ನಾಯಕ ಹುದ್ದೆಯಲ್ಲಿರುವುದರಿಂದ ಹಿಂದುಳಿದ ವರ್ಗದ ನಾಯಕರಿಗೆ ಪರಿಷತ್‌ನಲ್ಲಿ ಸ್ಥಾನ ನೀಡಲು ನಿರ್ಧರಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜಾತಿಯನ್ನೇ ಪ್ರತಿನಿಧಿಸುವ ಈಶ್ವರಪ್ಪ, ಮಾತಿನಲ್ಲೂ ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಲು ಸೂಕ್ತ ವ್ಯಕ್ತಿ ಎನ್ನುವುದು ಬಿಜೆಪಿ ವಲಯದಲ್ಲಿ ಕೇಳಿಬಂದಿದೆ.
 
ಆದರೆ ಮಾಜಿ ಸಚಿವ ವಿ.ಸೋಮಣ್ಣ ಕೂಡ ಈ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರೆ. ಕಾಂಗ್ರೆಸ್ ಸರ್ಕಾರ ರಚನೆಯಾದ ಸಂದರ್ಭದಲ್ಲಿ ಸದಾನಂದಗೌಡರನ್ನು ಪ್ರತಿಪಕ್ಷ ನಾಯಕ ಸ್ಥಾನದಲ್ಲಿ ಕೂರಿಸಿದ್ದಾಗ ಸೋಮಣ್ಣ ಅಸಮಾಧಾನಗೊಂಡು, ಕಲಾಪದಿಂದ ದೂರವಾಗಿದ್ದರು.
 
ಕೇಂದ್ರ ಸಮಿತಿಗೆ ಶಿಫಾರಸು: ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಪ್ರೊ.ಎಸ್.ವಿ.ಸಂಕನೂರ್ ಹೆಸರನ್ನು ಕೇಂದ್ರ ಚುನಾವಣಾ ಸಮಿತಿಗೆ ರಾಜ್ಯ ಬಿಜೆಪಿ ಶಿಫಾರಸು ಮಾಡಿದೆ. ಮತ್ತೆ ಪಕ್ಷಕ್ಕೆ ವಾಪಸ್ ಆಗಿರುವ ಮೋಹನ್ ಲಿಂಬಿಕಾಯಿ ಅವರಿಗೆ ಟಿಕೆಟ್ ನೀಡಲು ಬಿಜೆಪಿ ನಿರಾಕರಿಸಿದೆ. ಇದೇ ಕ್ಷೇತ್ರದ ಜತೆ ನಡೆಯಲಿರುವ ಉಳಿದ 3 ಕ್ಷೇತ್ರಗಳಿಗೆ ಈಗಾಗಲೇ ಶಿವಯೋಗಿಸ್ವಾವು, ನೀಲಯ್ಯ ಹಾಗೂ ಸುಶೀಲ್ ನಮೋಶಿ ಹೆಸರನ್ನು ಶಿಫಾರಸು ಮಾಡಲಾಗಿದೆ.
 
ಸದ್ಯ ಇಲ್ಲ ಸಂಪುಟ ವಿಸ್ತರಣೆ
 
ಬೆಂಗಳೂರು: ಚುನಾವಣೆ ನಂತರ ಸಚಿವ ಸಂಪುಟ ವಿಸ್ತರಣೆ ಸಾಧ್ಯತೆ ಸುಳಿವು ನೀಡಿದ್ದ ಸಿದ್ದರಾಮಯ್ಯ ಈಗ ಕೊಂಚ ದಿನ ಕಾದು ನೋಡುವ ತಂತ್ರಕ್ಕೆ ಶರಣಾಗಿದ್ದಾರೆ. ಫಲಿತಾಂಶಕ್ಕೆ ಎರಡು ದಿನ ಮೊದಲು ತಮ್ಮ ಆಪ್ತರ ಜತೆ ಸಮಾಲೋಚಿಸಿದಾಗ, ಮೇ 27ರಂದು ಸಂಪುಟ ಪುನಾರ್ರಚನೆ ಪ್ರಸ್ತಾಪ ಇಟ್ಟಿದ್ದರು. ಆದರೆ ಸೋಲಿನ ಬಿಸಿಯಿಂದ ಈ ಪ್ರಕ್ರಿಯೆಗೆ ಹಿನ್ನಡೆಯಾಗಿದೆ. ಜತೆಗೆ ನಿಗಮ-ಮಂಡಳಿ ಅಧ್ಯಕ್ಷ-ಉಪಾಧ್ಯಕ್ಷ ನೇಮಕ ಪ್ರಕ್ರಿಯೆಗೂ ಹಿನ್ನಡೆಯಾಗಲಿದೆ. ಸದ್ಯಕ್ಕೆ ವಿಧಾನ ಪರಿಷತ್ ನಾಮನಿರ್ದೇಶನ ಮತ್ತು ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆ ಬಗ್ಗೆಯಷ್ಟೇ ಅವರು ಗಮನ ನೀಡಲಿದ್ದಾರೆ.
 

ವೆಬ್ದುನಿಯಾವನ್ನು ಓದಿ