ಮತ್ತೆ ಎಂಇಎಸ್ ಪುಂಡಾಟಿಕೆ : ಮರಾಠಿ ನಾಮಫಲಕ ಮರುಸ್ಥಾಪನೆ

ಶನಿವಾರ, 26 ಜುಲೈ 2014 (16:04 IST)
ಬೆಳಗಾವಿಯಲ್ಲಿ ಎಂಇಎಸ್ ಕಾರ್ಯಕರ್ತರು ಮತ್ತೆ ಪುಂಡಾಟಿಕೆ ನಡೆಸಿದ್ದು, ಹೈಕೋರ್ಟ್‌ ಆದೇಶಕ್ಕೆ ಗೌರವಿಸದೇ ಮಹಾರಾಷ್ಟ್ರದಿಂದ ಅಪಾರ ಸಂಖ್ಯೆಯಲ್ಲಿ ಯಳ್ಳೂರಿಗೆ ಆಗಮಿಸಿದ ಎಂಇಎಸ್ ಕಾರ್ಯಕರ್ತರು ಮತ್ತೆ ಮರಾಠಿ ನಾಮಫಲಕವನ್ನು ಮರುಸ್ಥಾಪಿಸಿ ಉದ್ಧಟತನವನ್ನು ಪ್ರದರ್ಶಿಸಿದ್ದಾರೆ. ಇದರಿಂದ ಹೈಕೋರ್ಟ್ ಆದೇಶಕ್ಕೂ ಗೌರವ ನೀಡದೆ ನ್ಯಾಯಾಂಗ ನಿಂದನೆಯನ್ನು ಅವರು ಮಾಡಿದ್ದಾರೆ. ಯಳ್ಳೂರಿಗೆ ತೆರಳುತ್ತಿದ್ದ ಮಾಧ್ಯಮ ಮತ್ತು ಪೊಲೀಸರ ಮೇಲೆ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ್ದರಿಂದ ಪೊಲೀಸರು ಅಲ್ಲಿಂದ ಕಾಲ್ಕಿತ್ತಿದ್ದಾರೆ.  ಇಷ್ಟೆಲ್ಲಾ ಆದರೂ ಕೂಡ ಬೆಳಗಾವಿ ಜಿಲ್ಲಾಡಳಿತ ಮತ್ತು ಎಸ್‌ಪಿ ಚಂದ್ರಗುಪ್ತ ಸ್ಥಳಕ್ಕೆ ಆಗಮಿಸಿಲ್ಲವೆಂದು ಹೇಳಲಾಗಿದೆ. 

ಹೈಕೋರ್ಟ್ ಯಳ್ಳೂರಿನಲ್ಲಿ ಮರಾಠಿಯಲ್ಲಿ ಬರೆದ ಫಲಕವನ್ನು ತೆಗೆಯುವಂತೆ ಆದೇಶಿಸಿದ ಬಳಿಕ ಫಲಕವನ್ನು ತೆಗೆಯಲಾಗಿತ್ತು. ಗ್ರಾಮ ಪ್ರವೇಶಿಸದಂತೆ ಮಾಧ್ಯಮಗಳಿಗೆ ಎಂಇಎಸ್ ಕಾರ್ಯಕರ್ತರು ನಿರ್ಬಂಧ ವಿಧಿಸಿದ್ದಾರೆ.  ಈ ಫಲಕದಲ್ಲಿ ಮಹಾರಾಷ್ಟ್ರಕ್ಕೆ ಸೇರಿದ ಗ್ರಾಮ ಎಂದು ಬರೆಯಲಾಗಿತ್ತು. ಆದರೆ ಯಳ್ಳೂರು ಗ್ರಾಮ ಕರ್ನಾಟಕಕ್ಕೆ ಸೇರಿದ್ದರಿಂದ ಈ ನಾಮಫಲಕವನ್ನು ತೆಗೆಯುವಂತೆ ಹೈಕೋರ್ಟ್ ಆದೇಶ ನೀಡಿದ ಬಳಿಕ ಆ ನಾಮಫಲಕವನ್ನು ತೆಗೆದುಹಾಕಲಾಗಿತ್ತು.

ಆದರೆ ಆಕ್ರೋಶಗೊಂಡ  ಎಂಇಎಸ್ ಮತ್ತು ಶಿವಸೇನೆ ಕಾರ್ಯಕರ್ತರು ಕೊಲ್ಹಾಪುರದಲ್ಲಿ ಕೆಎಸ್‌ಆರ್‌ಟಿಸಿ ಬಸ್ಸುಗಳಿಗೆ ಕಲ್ಲು ತೂರಿ 5 ಬಸ್‌ಗಳನ್ನು ಧ್ವಂಸಗೊಳಿಸಿದ್ದರು. ಆದರೆ ಇಂದು ಮತ್ತೆ ಖ್ಯಾತೆ ತೆಗೆದ ಎಂಇಎಸ್ ಕಾರ್ಯಕರ್ತರು ನಾಮಫಲಕವನ್ನು ಮತ್ತೆ ಪ್ರತಿಷ್ಠಾಪಿಸಿದ್ದಾರೆ. ರಸ್ತೆಯಲ್ಲಿ ವಾಹನಸಂಚರಿಸದಂತೆ ಕೂಡ ಕಾರ್ಯಕರ್ತರು ತಡೆಹಾಕಿದ್ದರು. 
 

ವೆಬ್ದುನಿಯಾವನ್ನು ಓದಿ