ಆಯವ್ಯಯ ಮಂಡಿಸುವಲ್ಲಿ ನಗರಸಭಾಧ್ಯಕ್ಷರು ಯಶಸ್ವಿ: ಅಂಬಿಗೆ ಮುಖಭಂಗ

ಮಂಗಳವಾರ, 31 ಮಾರ್ಚ್ 2015 (18:39 IST)
ಮಂಡ್ಯ ನಗರಸಭೆಯಲ್ಲಿ ಇಂದು 2015-16ನೇ ಸಾಲಿನ ಬಜೆಟ್ ಮಂಡನೆಯಾಗಿದ್ದು, ವಿವಾದಿತ ನಗರಸಭಾಧ್ಯಕ್ಷ ಸಿದ್ದರಾಜು ಅವರು ತಮ್ಮ ಆಯವ್ಯಯಕ್ಕೆ ಸರಳ ಬಹುಮತ ಪಡೆಯುವ ಮೂಲಕ ಆಯವ್ಯಯವನ್ನು ಅಂಗೀಕರಿಸಿದ್ದಾರೆ. ಇದರಿಂದ ವಸತಿ ಸಚಿವ ಅಂಬರೀಶ್ ಅವರಿಗೆ ಮುಖಭಂಗವಾಗಿದೆ. 
 
ಇಂದು ಬೆಳಗ್ಗೆ 11 ಗಂಟೆಗೆ ಆರಂಭವಾದ ಬಜೆಟ್ ಅಧಿವೇಶನವನ್ನು ಪಕ್ಷೇತರ ಹಾಗೂ ಕಾಂಗ್ರೆಸ್ ಸದಸ್ಯರ ಬೆಂಬಲ ಪಡೆದ ಅಧ್ಯಕ್ಷ ಸಿದ್ದರಾಜು, ಸರಳ ಬಹುಮತದೊಂದಿಗೆ ಆಯವ್ಯಯವನ್ನು ಅಂಗೀಕರಿಸಿದರು.   
 
ಇನ್ನು ಬಜೆಟ್ ಅಂಗೀಕರಿಸುವಲ್ಲಿ ಯಶಸ್ವಿಯಾದ ಸಿದ್ದರಾಜು ಅವರು ಮಾಧ್ಯಮಗಳೊಂದಿಗೆ ಮಾತನಾಡಿದ್ದು, ರಾಜಕೀಯ ಎಂದರೆ ಸೋಲು ಗೆಲುವು ಸಾಮಾನ್ಯವಾಗಿದ್ದು, ಕಟ್ಟಿಟ್ಟ ಬುತ್ತಿ. ಎಲ್ಲದಕ್ಕೂ ಸಿದ್ದರಿರಬೇಕು. ಆದರೆ ನಾನು ಯಾರನ್ನೂ ದ್ವೇಷಿಸುತ್ತಿಲ್ಲ ಎಂದಿದ್ದಾರೆ. 
 
ಒಟ್ಟು 35 ಸದಸ್ಯರ ಬಲವಿರುವ ಮಂಡ್ಯ ನಗರ ಸಭೆಯಲ್ಲಿ ಇತ್ತೀಚೆಗೆ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಮಂಡಿಸಲು ನಿರ್ಧರಿಸಲಾಗಿತ್ತು. ಈ ಹಿನ್ನೆಲೆಯಲ್ಲಿಯೇ ನಿನ್ನೆ ಜೆಡಿಎಸ್‌ನ ಎಲ್ಲಾ ನಗರಸಭಾ ಸದಸ್ಯರೂ ಕೂಡ ತಮ್ಮ ನಾಯಕ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದರು. ಅಲ್ಲದೆ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸುವ ಜೆಡಿಎಸ್ ಸದಸ್ಯರ ನಿರ್ಧಾರಕ್ಕೆ ಕಾಂಗ್ರೆಸ್ ಕೂಡ ಬೆಂಬಲ ಸೂಚಿಸಿತ್ತು. 
 
ಇಷ್ಟಾಗಿಯೂ ಕೂಡ ಜೆಡಿಎಸ್‌ನ 5 ಮಂದಿ ಸದಸ್ಯರು ಆಯವ್ಯಯ ಮಂಡನೆ ವೇಳೆ ಭಾಗವಹಿಸಿದ್ದುದು ವಿಶೇಷವಾಗಿ ಕಂಡು ಬಂತು. ಆದರೆ ಈ ಬಗ್ಗೆ ಜೆಡಿಎಸ್ ಜಿಲ್ಲಾಧ್ಯಕ್ಷರು ಪ್ರತಿಕ್ರಿಯಿಸಿದ್ದು, ಬಜೆಟ್ ವೇಳೆ ಭಾಗಿಯಾಗಿದ್ದ ಸದಸ್ಯರಿಗೆ ನಾವು ತೆಗೆದುಕೊಂಡ ನಿರ್ಧಾರದ ಬಗ್ಗೆ ತಿಳಿದಿರಲಿಲ್ಲ ಎಂದಿದ್ದಾರೆ. 
 
ಈ ಹಿಂದೆ ಸಿದ್ದರಾಜು ಅವರಿಗೆ ಎಲ್ಲಾ ಸದಸ್ಯರ ಒಪ್ಪಿಗೆಯಂತೆ 15 ತಿಂಗಳ ಅವಧಿಗೆ ಅಧ್ಯಕ್ಷರ ಸ್ಥಾನ ನೀಡಲಾಗಿತ್ತು. ಆದರೆ ಅಧಿಕಾರಾವಧಿ ಮುಗಿದರೂ ಕೂಡ ಸಿದ್ದರಾಜು ಅವರು ನಗರಸಭಾ ಸ್ಥಾನವನ್ನು ಇತರರಿಗೆ ಬಿಟ್ಟು ಕೊಟ್ಟಿಲ್ಲ. ಇದು ಇತರೆ ಸದಸ್ಯರ ಕೆಂಗಣ್ಣಿಗೆ ಕಾರಣವಾಗಿದೆ. 
 
ಅಂಬರೀಶ್ ಅವರಿಗೆ ಮುಖಭಂಗವೇಕೆ ? 
ಮಂಡ್ಯ ಜಿಲ್ಲಾ ಕಾಂಗ್ರೆಸ್‌ನಲ್ಲಿ ಎರಡು ಬಣಗಳಾಗಿ ನಿರ್ಮಾಣವಾಗಿದ್ದು, ಒಂದು ಬಣ ಸಚಿವ ಅಂಬರೀಶ್ ಬೆಂಬಲಕ್ಕೆ ನಿಂತಿದ್ದರೆ, ಮತ್ತೊಂದು ಬಣ ಜಿಲ್ಲಾಧ್ಯಕ್ಷರ ಪರವಾಗಿದೆ. ಅಧ್ಯಕ್ಷ ಸಿದ್ದರಾಜು ಅವರನ್ನು ಅಂಬರೀಶ್ ಬಣ ವಿರೋಧಿಸುತ್ತಿದ್ದರೆ, ಜಿಲ್ಲಾಧ್ಯಕ್ಷರ ಬಣ ಬೆಂಬಲಿಸುತ್ತಿದೆ. ಜಿಲ್ಲಾಧ್ಯಕ್ಷರ ಬಣ ಸಿದ್ದರಾಜು ಅವರಿಗೆ ಇಂದಿನ ಆಯವ್ಯಯ ಮಂಡನೆ ವೇಳೆ ಬೆಂಬಲಿಸಿತು. ಈ ಹಿನ್ನೆಲೆಯಲ್ಲಿಯೇ ಆಯವ್ಯಯ ಅಂಗೀಕಾರವಾಯಿತು. ಇದರಿಂದ ಅಂಬರೀಶ್ ಅವರಿಗೆ ಮುಖಭಂಗ ಎದುರಾಯಿತು. 

ವೆಬ್ದುನಿಯಾವನ್ನು ಓದಿ