ಮಹಿಳೆಗೆ 11 ಕೋಟಿ ಪಂಗನಾಮ ಹಾಕಿದ ಸಚಿವ ಚಿಂಚನಸೂರ...?!

ಸೋಮವಾರ, 6 ಜುಲೈ 2015 (17:45 IST)
ರಾಜ್ಯ ಸರ್ಕಾರಕ್ಕೆ ಪ್ರಸ್ತುತ ಬಹುದೊಡ್ಡ ಕಂಟಕವೊಂದು ಎದುರಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ಉತ್ತರಿಸಲೇಬೇಕಾದಂತಹ ಸನ್ನಿವೇಶ ಎದುರಾಗಿದೆ.  
 
ಹೌದು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಜವಳಿ, ಬಂದರು ಹಾಗೂ ಒಳನಾಡು ಸಾರಿಗೆ ಸಚಿವರಾಗಿರುವ ಬಾಬುರಾವ್ ಚಿಂಚನಸೂರ್ ಅವರ ಮೇಲೆ ವಂಚನೆ ಮಾಡಿದ ಆರೋಪ ಕೇಳಿ ಬರುತ್ತಿದೆ. ಹುಬ್ಬಳ್ಳಿ ಮೂಲದ ಮಹಿಳೆಯೋರ್ವರು ಬೃಹತ್ ಆರೋಪವೊಂದನ್ನು ಮಾಡಿದ್ದು, ಸಚಿವರು ತಮ್ಮಿಂದ ವೈಯಕ್ತಿಕವಾಗಿ 11 ಕೋಟಿ 88 ಲಕ್ಷ ರೂ ವಂಚಿಸಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ.   
 
ಪ್ರಕರಣದ ಹಿನ್ನೆಲೆ: ಹುಬ್ಬಳ್ಳಿ ಮೂಲದ ಅಂಜನಾ ಎ.ಶಾಂತವೀರ್ ಎಂಬ ಮಹಿಳೆ ಈ ಆರೋಪವನ್ನು ಮಾಡಿದ್ದು, ತಮ್ಮ ಒಡೆತನದ ಸಾಯಿ ಕೆಮಿಕಲ್ಸ್, ಅಮರ್ ಡಿಸ್ಟಿಲರೀಸ್ ಹಾಗೂ ಶಕ್ತಿ ಮಿಲ್ ಎಂಬ ಮೂರು ಕಂಪನಿಗಳು ನಷ್ಟದಲ್ಲಿದ್ದು, ಅವುಗಳನ್ನು ಪುನಶ್ಚೇತನಗೊಳಿಸುವ ಅವಶ್ಯವಿದೆ. ಈ ಹಿನ್ನೆಲೆಯಲ್ಲಿ ತಾವು ದಯಮಾಡಿ ಹಣ ನೀಡಬೇಕು. ಮತ್ತೆ ಒಂದೇ ವರ್ಷದಲ್ಲಿ ಹಿಂದಿರುಗಿಸುತ್ತೇನೆ ಎಂದು ತಮ್ಮಲ್ಲಿ ಕೇಳಿ ಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಸಚಿವರಿಗೆ 2011ರ ಜನವರಿಯಿಂದ 12 ಬಾರಿ ಹಣ ನೀಡಿದ್ದು, ಒಟ್ಟು 11 ಕೋಟಿ 88 ಲಕ್ಷ ರೂ ನೀಡಿದ್ದೇನೆ. ಆದರೆ 2012ರಿಂದಲೂ ಕೂಡ ಹಣ ಹಿಂದಿರುಗಿಸುವಂತೆ ಕೇಳಿಕೊಂಡಿದ್ದೆ. ಆದರೆ ಅವರು ಹಣ ನೀಡುವಲ್ಲಿ ಲಕ್ಷ್ಯವೇ ತೋರುತ್ತಿಲ್ಲ ಎಂದು ಆರೋಪಿಸಿದ್ದಾರೆ. ಅಲ್ಲದೆ ಈ ಸಂಬಂಧ ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ಕಳೆದ ಮೇ 29ರಂದು ಸಚಿವರ ವಿರುದ್ಧ ದೂರು ದಾಖಲಿಸಿದ್ದಾರೆ. 
 
ದೂರು ನೀಡಲು ಕಾರಣವೇನು?: 
(ಮಹಿಳೆಯ ಹೇಳಿಕೆ ಪ್ರಕಾರ)ಹಣ ಕೊಟ್ಟಿರುವುದಕ್ಕೆ ಸಂಬಂಧಿಸಿದಂತೆ ಕಳೆದ ಏಪ್ರಿಲ್ 30ರಂದು ಸಚಿವರೇ ಖುದ್ದು ಸಂಪೂರ್ಣವಾಗಿ ಹಣ ನಮೂದಿಸಿದ್ದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್‌ಗೆ ಸೇರಿದ ತಮ್ಮ ಹೆಸರಿನಲ್ಲಿದ್ದ ಚೆಕ್ ನೀಡಿದ್ದರು. ಆದರೆ ಅದು ಬೌನ್ಸ್ ಆಗಿತ್ತು. ಈ ಹಿನ್ನೆಲೆಯಲ್ಲಿ ದೂರು ನೀಡಿದ್ದೇನೆ ಎಂದಿದ್ದಾರೆ.
 
ಇನ್ನು ದೂರುದಾರ ಮಹಿಳೆಯು ಚೆಕ್ ಹಾಗೂ ಬಾಂಡ್‌ ಎರಡನ್ನೂ ಕೂಡ ಮಾಧ್ಯಮಗಳೆದುರು ಪ್ರಸ್ತುತಪಡಿಸಿದ್ದು, ಎರಡರಲ್ಲಿಯೂ ಕೂಡ ಸಚಿವರ ಸಹಿ ಇದೆ. ಅಲ್ಲದೆ ಬಾಂಡ್‌ನಲ್ಲಿ ಶಿವಯ್ಯ ಹಾಗೂ ನಾಗರಾಜ್ ಎಂಬ ಇಬ್ಬರು ವ್ಯಕ್ತಿಗಳು ಸಾಕ್ಷಿಗಳಾಗಿ ಸಹಿ ಮಾಡಿರುವುದು ದಾಖಲಾಗಿದೆ.  
 
ದೂರು ನೀಡಿರುವ ಮಹಿಳೆ ಆಡಿಯೋ ಕ್ಲಿಪ್‌ವೊಂದನ್ನು ಬಿಡುಗಡೆಗೊಳಿಸಿದ್ದು, ಅದರಲ್ಲಿ ಸಚಿವರ ವಿಶೇಷಾಧಿಕಾರಿ ಡಾ.ಬಸವರಾಜ್ ಹಾಗೂ ದೂರುದಾರ ಮಹಿಳೆ ಅಂಜನಾ ಅವರ ಸಂಭಾಷಣೆ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಬಸವರಾಜ್, ಹೌದು ಆ ಸಂಭಾಷಣೆ ತನ್ನದೇ ಎಂದು ಒಪ್ಪಿಕೊಂಡೂ ಇದ್ದಾರೆ. 
 
ಸರ್ಕಾರಕ್ಕೆ ಏಕೆ ಸಂಕಷ್ಟ?:
ಬಸವರಾಜ್ ಹಾಗೂ ಅಂಜನಾ ಮಾತನಾಡಿರುವ ಆಡಿಯೋ ಕ್ಲಿಪ್‌ನಲ್ಲಿ ಜವಳಿ ಮಂಡಳಿಯ ಪ್ರಸ್ತಾಪವಾಗಿದ್ದು, ವಿಶೇಷಾಧಿಕಾರಿ ಬಸವರಾಜ್ ಅವರು ಅಂಜನಾ ಅವರಿಗೆ ಸಚಿವರು ಇನ್ನೂ ಮೂರು ವರ್ಷಗಳ ಕಾಲ ಅಧಿಕಾರದಲ್ಲಿರುತ್ತಾರೆ. ಅಷ್ಟರಲ್ಲಿ ನಿಮ್ಮನ್ನು ಜವಳಿ ಮಂಡಳಿಗೆ ಅಧ್ಯಕ್ಷರನ್ನಾಗಿ ಮಾಡಲಾಗುತ್ತದೆ. ಆದರೆ ಪ್ರಸ್ತುತ ನಿರ್ದೇಶಕಿ ಅಥವಾ ಸದಸ್ಯೆಯಾಗಿ ನೇಮಕಗೊಳಿಸಲಾಗುತ್ತದೆ ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಡಳಿಯ ಹುದ್ದೆಗಳನ್ನು ಅವಂಕರಿಸು ಸಲುವಾಗಿಯೇ ಈ ವ್ಯವಹಾರ ನಡೆಸಲಾಗಿದೆಯೇ ಎಂಬ ಅನುಮಾನಗಳೂ ಮೂಡಿವೆ. ಅಲ್ಲದೆ ಮಂಡಳಿಯ ಹುದ್ದೆಗಳನ್ನು ಅಲಂಕರಿಸಬೇಕಾದಲ್ಲಿ ಇಂತಹ ಬೃಹತ್ ಮೊತ್ತವನ್ನು ನೀಡುವ ಮೂಲಕ ಪಟ್ಟ ಅಲಂಕರಿಸಬೇಕೆ. ಹಾಗಾದರೆ ಹಲವು ವರ್ಷಗಳ ಕಾಲ ಪಕ್ಷಕ್ಕಾಗಿ ಸೇವೆ ಸಲ್ಲಿಸಿದ ಕಾರ್ಯಕರ್ತರಿಗೆ ಆ ಮಾನ್ಯತೆ ಸಿಗುವುದಿಲ್ಲವೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಈ ಸಂಬಂಧ ಉತ್ತರಿಸಬೇಕಾದ ಅನಿವಾರ್ಯತೆ ಇದೆ. 
 
ಈ ಸಂಭಾಷಣೆ ಹಾಗೂ ವ್ಯವಹಾರಕ್ಕೆ ಯಾವುದೇ ರೀತಿಯ ಸಂಬಂಧವಿಲ್ಲ. ಆದರೆ ಹಲವು ವರ್ಷಗಳಿಂದ ಸಚಿವ ಹಾಗೂ ನಮ್ಮ ಕುಟುಂಬದ ಸಂಬಂಧ ಉತ್ತಮವಾಗಿದ್ದರಿಂದ ಮಂಡಳಿಯಲ್ಲಿ ಅಧ್ಯಕ್ಷ ಸ್ಥಾನವನ್ನು ಕೊಡಿಸುವಂತೆ ಕೇಳಿದ್ದೆ ಎಂದು ಅಂಜನಾ ಹೇಳಿದ್ದಾರೆ. 
 
ಈ ಸಂಬಂಧ ಸ್ವತಃ ಸಚಿವರೇ ಪ್ರತಿಕ್ರಿಯಿಸಿದ್ದು, ನಾನು ಜಮೀನ್ದಾರಿ ಕುಟುಂಬದಿಂದ ಬಂದವನು. ನನಗೆ ಮತ್ತೋರ್ವರಿಂದ ಹಣ ಕೇಳು ಪ್ರಮೇಯ ಎಂದೂ ಎದುರಾಗಿಲ್ಲ. ಅಲ್ಲದೆ ನಾನು ಅವರ ಬಳಿ ಹಣ ಪಡೆದಿಲ್ಲ. ನಮ್ಮ ಕುಟುಂಬ ಅವರ ಕುಟುಂಬದೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಹಿನ್ನೆಲೆಯಲ್ಲಿ ಅಂಜನಾ ಅವರು ಆಗಾಗ ನಮ್ಮ ಮನೆಗೆ ಬರುತ್ತಿದ್ದರು. ಈ ವೇಳೆ ನನ್ನ ಹೆಸರಿನಲ್ಲಿನ ಚೆಕ್ಕೊಂದನ್ನು ಅವರೇ ಕದ್ದಿದ್ದು, ಪ್ರಸ್ತುತ ನಕಲಿ ದಾಖಲೆಗಳನ್ನು ಸೃಷ್ಟಿಸಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ. ನಾನು ಅತ್ಯಾಚಾರ ಅಥವಾ ಕಿಡ್ನ್ಯಾಪ್ ಮಾಡಿದವನಲ್ಲ. ಆದ್ದರಿಂದ ಹೆದರುವ ಸನ್ನಿವೇಶವಿಲ್ಲ. ನಾನೂ ಕೂಡ ನ್ಯಾಯಾಲದಲ್ಲಿ ದೂರು ನೀಡಿದ್ದು, ಅಲ್ಲಿಯೇ ಬಗೆ ಹರಿಯಲಿ ಎಂದು ಹಣ ಪಡೆದಿದ್ದೆ ಎಂಬ ವಿಷಯವನ್ನು ತಳ್ಳಿಹಾಕಿದ್ದಾರೆ.   

ವೆಬ್ದುನಿಯಾವನ್ನು ಓದಿ