ಸಿಎಂ ಆದೇಶದ ವಿರುದ್ಧ ಸಚಿವ ಅಂಜನೇಯ ಅಸಮಾಧಾನ

ಗುರುವಾರ, 30 ಜೂನ್ 2016 (14:12 IST)
ಕಲಬುರಗಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಅಧಿಕಾರಿಯಾಗಿರುವ ವಿಜಯಲಕ್ಷ್ಮಿಯವರನ್ನು ಭ್ರಷ್ಟಾಚಾರದ ಆರೋಪಗಳ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅಮಾನತುಗೊಳಿಸಿ ಆದೇಶ ನೀಡಿದ್ದರು. ಇದೀಗ ಸಿಎಂ ಆದೇಶದ ವಿರುದ್ಧ ಸಚಿವ ಎಚ್.ಅಂಜನೇಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ವಿಜಯಲಕ್ಷ್ಮಿ ವಿರುದ್ಧ ಭ್ರಷ್ಟಾಚಾರದ ಆರೋಪಗಳು ಬಹಿರಂಗವಾಗಿದ್ದರೂ ಮತ್ತೆ ಅವರನ್ನೇ ಸಮರ್ಥಿಸಿಕೊಂಡ ಸಚಿವ ಅಂಜನೇಯ, ಆಕೆ ಅಮಾಯಕಳು, ಭ್ರಷ್ಟಾಚಾರ ನಡೆಸಿಲ್ಲ. ವಿಚಾರಣೆ ನಡೆಸದೆಯೇ ಜಿಲ್ಲಾಧಿಕಾರಿ ಕ್ರಮ ಕೈಗೊಂಡಿದ್ದಾರೆ ಎಂದು ಜಿಲ್ಲಾಧಿಕಾರಿಯ ವಿರುದ್ಧವೇ ಗುಡುಗಿದರು. 
 
ಈ ಮೊದಲು ನಡೆದ ಸಭೆಯಲ್ಲಿ ಕೂಡಾ ಸಚಿವ ಅಂಜನೇಯ ವಿಜಯಲಕ್ಷ್ಮಿಯವರನ್ನು ಸಮರ್ಥಿಸಿಕೊಂಡಾಗ, ಸಿಎಂ ಸಿದ್ದರಾಮಯ್ಯ ಸಚಿವ ಅಂಜನೇಯಗೆ ತರಾಟೆಗೆ ತೆಗೆದುಕೊಂಡಿದ್ದರು. ಇದೀಗ ಮತ್ತೆ ಅವರನ್ನು ಸಮರ್ಥಿಸಿಕೊಂಡ ಸಚಿವ ಅಂಜನೇಯ ಸಿಎಂ ಸಿದ್ದರಾಮಯ್ಯ ಕೆಂಗೆಣ್ಣಿಗೆ ಗುರಿಯಾಗಿದ್ದಾರೆ.
 
ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ವಿಜಯಲಕ್ಷ್ಮಿ ಅಮಾನತು ದುರುದ್ದೇಶಪೂರ್ವಕವಾಗಿದೆ. ಅವರ ವಿರುದ್ಧದ ಆರೋಪಗಳಲ್ಲಿ ಸತ್ಯಾಂಶವಿಲ್ಲ ಎಂದು ಸಚಿವ ಅಂಜನೇಯ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿರುವುದು ಸಿಎಂ ಸಿದ್ದರಾಮಯ್ಯ ಆಕ್ರೋಶಕ್ಕೆ ಕಾರಣವಾಗಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ