ಇಂದು ಬೆಂಗಳೂರು ಬಂದ್: ಬಸ್ ಸಂಚಾರದಲ್ಲಿ ವ್ಯತ್ಯಯವಿಲ್ಲ, ಮಿಶ್ರ ಪ್ರತಿಕ್ರಿಯೆ

ಗುರುವಾರ, 31 ಜುಲೈ 2014 (11:11 IST)
ರಾಜ್ಯದಲ್ಲಿ ಹೆಚ್ಚುತ್ತಿರುವ ಸರಣಿ ಅತ್ಯಾಚಾರ ಮತ್ತು ಬೆಳಗಾವಿಯಲ್ಲಿ ಎಮ್ಇಎಸ್ ಪುಂಡಾಟವನ್ನು ಖಂಡಿಸಿ ಸುಮಾರು 70ಕ್ಕಿಂತ ಹೆಚ್ಚು ಕನ್ನಡಪರ ಸಂಘಟನೆಗಳು ಇಂದು ರಾಜಧಾನಿ ಬಂದ್‌ಗೆ ಕರೆ ನೀಡಿದ್ದು ನಗರದಲ್ಲಿ ಬಿಎಂಟಿಸಿ ಮತ್ತು ಕೆಎಸ್ಆರ್‌ಟಿಸಿ ಯಥಾ ಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. 

ಬಂದ್‌ಗೆ ನಗರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಜನಜೀವನ ಎಂದಿನಂತೆ ಸಹಜವಾಗಿದೆ. ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್, ಆಟೋ ಹಾಗೂ ರೈಲು ಸಂಚಾರದಲ್ಲಿ ಯಾವುದೇ ವತ್ಯಯ ಉಂಟಾಗಿಲ್ಲ. ಸರಕಾರಿ ಶಾಲೆಗಳು ತೆರೆದಿವೆ. ಪ್ರಯಾಣಿಕರ ಸಂಖ್ಯೆ ಕಡಿಮೆ ಇರುವುದರಿಂದ ಶೇ.10ರಷ್ಟು ಬಿಎಂಟಿಸಿ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ.
 
ಕೆಲ ಖಾಸಗಿ ಶಾಲೆಗಳು, ಕಾಲೇಜುಗಳು ರಜೆ ಘೋಷಿಸಿದ್ದು, ಆರ್‌ಎಂಸಿ ಯಾರ್ಡ್, ನಗರದ ಬಹುತೇಕ  ಮಾಲ್‌ಗಳು, ಚಿತ್ರ ಮಂದಿರಗಳು, ಹೋಟೆಲ್ ಮಾಲೀಕರು, ಸರ್ಕಾರಿ ನೌಕರರ ಸಂಘಟನೆ, ಹಾಗೂ ಬೆಂಗಳೂರು ಜ್ಯುವೆಲ್ಲರ್ಸ್ ಮಾಲೀಕರ ಸಂಘ ಮತ್ತು ಗಾರ್ಮೆಂಟ್ಸ್ ಕಂಪನಿಗಳು ಸಹ ಬಂದ್‌ಗೆ ಬೆಂಬಲ ಸೂಚಿಸಿ ರಜೆ ಘೋಷಣೆ ಮಾಡಿವೆ.
 
2 ಬಿಎಂಟಿಸಿ ಬಸ್‌ಗಳ ಮೇಲೆ ಕಲ್ಲೆಸೆದ ವರದಿಯಾಗಿದ್ದು ಚಂದಾಪುರ ಬಳಿ ಯಲಹಂಕದಿಂದ ಶಿವಾಜಿನಗರಕ್ಕೆ ಬರುತ್ತಿದ್ದ ಬಸ್ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ.  ಯಾವುದೇ ಅಪಾಯಗಳು ಸಂಭವಿಸಿಲ್ಲ.ಪ್ರಯಾಣಿಕರನ್ನು ಬಸ್ಸಿನಿಂದ ಇಳಿಸಿ ಬೇರೆ ಬಸ್ಸಿನಲ್ಲಿ ಕಳುಹಿಸಲಾಗಿದೆ. ಇದನ್ನು ಬಿಟ್ಟರೆ ಯಾವುದೇ ಅಹಿತಕರ ಪ್ರಕರಣಗಳು ವರದಿಯಾಗಿಲ್ಲ.  
 
ಪುರಭವನವದ ಮುಂದೆ ಪ್ರತಿಭಟನೆ ಕೈಗೊಂಡಿರುವ ವಿವಿಧ ಸಂಘಟನೆಗಳು ನ್ಯಾಯಕ್ಕಾಗಿ ಆಗ್ರಹಿಸುತ್ತಿವೆ.ಕರ್ನಾಟಕದಲ್ಲಿ ರೇಪ್ ಪ್ರಕರಣಗಳು ನಿಲ್ಲಬೇಕು, ಕಾಮುಕರ ರಾಜ್ಯ, ಬೆಂಗಳೂರು ರೇಪ್ ಸಿಟಿ ಎಂಬ ಕಳಂಕವನ್ನು ತೊಡೆದು ಹಾಕಬೇಕು , ಎಮ್ಇಎಸ್ ಪುಂಡಾಟ ನಿಲ್ಲಬೇಕು. ಈ ಬಗ್ಗೆ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
 
ಕರವೇ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಕೈಗೊಂಡಿದೆ. ನಗರದ ವಿವಿಧ ಕಡೆಗಳಲ್ಲಿ ಪ್ರತಿಭಟನಾ ಮೆರವಣಿಗೆಗಳು ನಡೆದಿವೆ. ನಗರದಾದ್ಯಂತ ಬಿಗಿ ಪೋಲಿಸ್ ಭದ್ರತೆಯನ್ನು ಕೈಗೊಳ್ಳಲಾಗಿದೆ. 

ವೆಬ್ದುನಿಯಾವನ್ನು ಓದಿ