ಸಿಎಂ ವಿರುದ್ಧ ಶಾಸಕ ನಡಹಳ್ಳಿ ವಾಗ್ದಾಳಿ: ಕಾರಣ ಕೇಳಿ ನೋಟಿಸ್ ಜಾರಿ

ಶನಿವಾರ, 11 ಏಪ್ರಿಲ್ 2015 (13:46 IST)
ನೀರಾವರಿ ಯೋಜನೆಗಳಿಗೆ ಕಡಿಮೆ ಅನುದಾನ ನೀಡಲಾಗಿದೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯವಿರುದ್ಧ ವಾಗ್ದಾಳಿ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ಇಂದು ನೋಟಿಸ್ ಜಾರಿಗೊಳಿಸಿದ್ದಾರೆ, 
 
ಸಿಎಂ ಸಿದ್ದರಾಮಯ್ಯನವರ ಆದೇಶದ ಮೇರೆಗೆ ನೋಟಿಸ್ ಜಾರಿಗೊಳಿಸಲಾಗಿದ್ದು, ನೋಟಿಸ್‌ನಲ್ಲಿ, ಪಕ್ಷದ ಗೌರವಾನ್ವಿತ ಶಾಸಕರಾದ ನೀವು ನಿನ್ನೆ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ  ವಾಗ್ದಾಳಿ ನಡೆಸಿದ್ದೀರಿ. ಇದು ಪಕ್ಷ ವಿರೋಧಿ ಚಟುವಟಿಕೆ. ಸರ್ಕಾರ ಅಖಂಡ ಕರ್ನಾಟಕದ ಪರವಾಗಿ ಸೇವೆ ಮಾಡುತ್ತಿದೆ. ಆದರೆ ಸರ್ಕಾರದ ವಿರುದ್ಧ ಅಥವಾ ಮುಖ್ಯಮಂತ್ರಿಗಳ ವಿರುದ್ಧ ವಾಗ್ದಾಳಿ ನಡೆಸಿರುವುದು ಸರಿಯಲ್ಲ. ಈ ಹಿನ್ನೆಲೆಯಲ್ಲಿ ತಾವು ಒಂದು ವಾರದ ಒಳಗೆ ಸೂಕ್ತವಾಗಿ ಉತ್ತರ ನೀಡಿ. ಇಲ್ಲದಿದ್ದಲ್ಲಿ ನಿಮ್ಮ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ಶಿಫಾರಸು ಮಾಡಲಾಗುವುದು ಎಂದು ಶಾಸಕರಿಗೆ ಪರಮೇಶ್ವರ್ ಸೂಚಿಸಿದ್ದಾರೆ ಎನ್ನಲಾಗಿದೆ. 
 
ಪ್ರಕರಣದ ಹಿನ್ನೆಲೆ: ನಿನ್ನೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ್ದ ಶಾಸಕ ನಡಹಳ್ಳಿ ಅವರು, ಉತ್ತರ ಕರ್ನಾಟಕ ಭಾಗದ ನೀರಾವರಿ ಯೋಜನೆಗಳ ಬಗ್ಗೆ ಕಾಂಗ್ರೆಸ್ ಸರ್ಕಾರ ಪ್ರತಿ ವರ್ಷ ಕೂಡ ನಿರ್ಲಕ್ಷ್ಯ ವಹಿಸುತ್ತಿದ್ದು, ಕಡಿಮೆ ಅನುಧಾನವನ್ನು ಬಿಡುಗಡೆಗೊಳಿಸಲಾಗುತ್ತಿದೆ. ಈ ಮೂಲಕ ಸಿಎಂ ಸಿದ್ದರಾಮಯ್ಯನವರು ಉತ್ತರ ಕರ್ನಾಟಕವನ್ನು ಪ್ರತ್ಯೇಕವಾಗಿ ಪರಿಗಣಿಸುತ್ತಿದ್ದು, ಅನ್ಯಾಯ ಎಸಗುತ್ತಿದ್ದಾರೆ. ಇಂತಹ ಮುಖ್ಯಮಂತ್ರಿಗಳನ್ನು ನಾನು ನನ್ನ ಜೀವಮಾನದಲ್ಲಿಯೇ ನೋಡಿಲ್ಲ ಎಂದು ಸಿಎಂ ಸಿದ್ದರಾಮಯ್ಯನವರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ನೋಟಿಸ್ ಜಾರಿಗೊಳಿಸಲಾಗಿದೆ. 
 
ನೋಟಿಸ್ ಜಾರಿಗೊಳಿಸಿರುವ ಬಗ್ಗೆ ನೀರಾವರಿ ಸಚಿವ ಎಂ,ಬಿ.ಪಾಟೀಲ್ ಅವರು ಸ್ಪಷ್ಟಪಡಿಸಿದ್ದು, ನೀರಾವರಿ ಯೋಜನೆಗಳಿಗೆ ಸರ್ಕಾರ ಹೆಚ್ಚಿನ ಅನುದಾನವನ್ನೂ ನೀಡಿದೆ ಎಂದು ಸಿದ್ದರಾಮಯ್ಯ ಹಾಗೂ ಸರ್ಕಾರವನ್ನು ಸಮರ್ಥಿಸಿಕೊಂಡಿದ್ದಾರೆ. 
 
ಉತ್ತರ ಕರ್ನಾಟಕಕ್ಕೆ ಸರ್ಕಾರದಿಂದ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯ ಮಾಡಿಕೊಳ್ಳಬೇಕು ಎಂದು ಹೇಳಿಕೆ ನೀಡಿದ್ದ ವಿಷಯಕ್ಕೆ ಸಂಬಂಧಿಸಿದಂತೆ ಶಾಸಕ ನಡಹಳ್ಳಿ ಅವರಿಗೆ ಈ ಹಿಂದೆಯೇ ಶಾಸಕಾಂಗ ಪಕ್ಷದ ಕಾರ್ಯದರ್ಶಿ ಅಪ್ಪಾಜಿ ಗೌಡ ಅವರು ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದರು. 

ವೆಬ್ದುನಿಯಾವನ್ನು ಓದಿ