ಸದನದಲ್ಲಿ ನೀರಿಗಾಗಿ ಕಣ್ಣೀರು ಹಾಕಿದ ಶಾಸಕ ಶಿವಲಿಂಗೇಗೌಡ

ಗುರುವಾರ, 18 ಡಿಸೆಂಬರ್ 2014 (12:28 IST)
ಇಲ್ಲಿ ಇಂದು ನಡೆಯುತ್ತಿರುವ ವಿಧಾನಸಭಾ ಕಲಾಪದಲ್ಲಿ ನೀರಿನ ಯೋಜನೆ ಜಾರಿ ಬಗ್ಗೆ ಪ್ರಸ್ತಾಪಿಸುತ್ತಿದ್ದ ವೇಳೆ ಅರಸೀಕೆರೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಅವರು ಅತಿ ಭಾವನಾತ್ಮಕವಾಗಿ ಮಾತನಾಡುತ್ತಾ ಕಣ್ಣೀರು ಹಾಕಿದ ಸನ್ನಿವೇಶ ಸದನದಲ್ಲಿ ಕಂಡುಬಂತು. 
 
ವಿಷಯ ಪ್ರಸ್ತಾಪಿಸುತ್ತಿದ್ದ ಶಾಸಕ ಶಿವಲಿಂಗೇಗೌಡ, ನಮ್ಮ ಕ್ಷೇತ್ರದ ಜನರಿಗೆ ಕುಡಿಯುವ ನೀರನ್ನು ಒದಗಿಸಲು ಸರ್ಕಾರ 2012ರಲ್ಲಿ ಯೋಜನೆ ಜಾರಿ ಮಾಡಿದೆ. ಆದರೆ ಸರ್ಕಾರ ರಚನೆಯಾಗಿ ವರ್ಷ ಕಳೆದರೂ ಕೂಡ ಕ್ಷೇತ್ರಕ್ಕೆ ನೀರು ಹರಿದು ಬರಲೇ ಇಲ್ಲ. ಕ್ಷೇತ್ರದ 477 ಹಳ್ಳಿಗಳ ಜನರಿಗೆ ನಾನು ಶಾಸಕನಾಗಿ ಉತ್ತರಿಸುವುದು ಕಷ್ಟವಾಗಿದೆ. ಅಲ್ಲದೆ ಕಳೆದ ಸುಮಾರು ವರ್ಷಗಳಿಂದಲೂ ಕೂಡ ಫ್ಲೋರೈಡ್‌ಯುಕ್ತ ನೀರನ್ನೇ ಕುಡಿಯುತ್ತಿದ್ದೇವೆ. ಜನರು ಹೇಮಾವತಿ ನೀರು ಬರಬಹುದೆಂಬ ಕಾತರದಲ್ಲಿದ್ದಾರೆ. ಸರ್ಕಾರಕ್ಕೆ ಈ ವಿಷಯ ಅರ್ಥವಾಗುತ್ತಿಲ್ಲವೇ, ಯಾಕೆ ಸರ್ಕಾರ ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಭಾವುಕರಾಗಿಯೇ ಪ್ರತಿಕ್ರಿಯಿಸಿದರು. 
 
ಪ್ರಶ್ನೆಗೆ ಉತ್ತರಿಸಿದ ಗ್ರಾಮೀಣಾಭಿವೃದ್ಧಿ ಸಚಿವ ಹೆಚ್.ಕೆ.ಪಾಟೀಲ್, ಶಾಸಕರು ಭಾವುಕರಾಗುವುದು ಬೇಡ. ಯೋಜನೆ ಜಾರಿಯಾಗಿದೆ. ಆದರೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಹಾಗಾಗಿ ತಪ್ಪಿತಸ್ಥರ ವಿರುದ್ಧ ಚಾಟಿ ಬೀಸಿ ಕ್ರಮ ಕೈಗೊಳ್ಳುತ್ತೇವೆ, ಶೀಘ್ರದಲ್ಲಿಯೇ ನೀರು ಕೊಡುತ್ತೇವೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂಬ ಭರವಸೆ ನೀಡಿದರು. 
 
ಇದೇ ವೇಳೆ ನೀರಿಗೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಸುಧಾಕರ್ ಕೂಡ ಮಾತನಾಡಿ, ನಮ್ಮ ಕ್ಷೇತ್ರದ ಜನರೂ ಕೂಡ ನೀರಿನ ಸಮಸ್ಯೆಯಿಂದ ಬಳಲುತ್ತಿದ್ದು, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲಾ ವ್ಯಾಪ್ತಿಯ ಜನರು 20 ವರ್ಷಗಳಿಂದಲೂ ಕೂಡ ಫ್ಲೋರೈಡ್ ಮಿಶ್ರಿತ ನೀರನ್ನೇ ಕುಡಿಯುತ್ತಿದ್ದು, ಹಲವು ರೋಗಗಳಿಗೆ ತುತ್ತಾಗುತ್ತಿದ್ದಾರೆ. ಹಾಗಾಗಿ ಆದಷ್ಟು ಬೇಗ ನೀರು ಕೊಟ್ಟಲ್ಲಿ ಒಳಿತು ಎಂದು ಮನವಿ ಮಾಡಿಕೊಂಡರು. 

ವೆಬ್ದುನಿಯಾವನ್ನು ಓದಿ