ನರೇಗಾ ವೈಫಲ್ಯತೆ ಕಾಂಗ್ರೆಸ್‌ಗೆ ಹಿಡಿದ ಕೈಗನ್ನಡಿ: ಮೋದಿ ನೇರ ವಾಗ್ದಾಳಿ

ಶುಕ್ರವಾರ, 27 ಫೆಬ್ರವರಿ 2015 (14:51 IST)
ಭೂ ಸ್ವಾದೀನ ಕಾಯಿದೆಯನ್ನು ಮುಂದಿಟ್ಟುಕೊಂಡು ಚುನಾವಣೆಗೆ ಸ್ಪರ್ಧಿಸಿದ್ದ ಹಿನ್ನೆಲೆಯಲ್ಲಿಯೇ ಕಾಂಗ್ರೆಸ್ ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇಂದಿನ ಸಂಸತ್ ಅಧಿವೇಶನದಲ್ಲಿ ಕಾಂಗ್ರೆಸ್ ವಿರುದ್ಧ ನೇರ ವಾಗ್ದಾಳಿ ನಡೆಸಿದರು.
 
ಇಂದಿನ ಸಂಸತ್ ಭವನದಲ್ಲಿ ನಡೆಯುತ್ತಿರುವ ಅಧಿವೇಶನ ಸಂಭರ್ಭದಲ್ಲಿ ಕಾಂಗ್ರೆಸ್ ಕೇಂದ್ರ ಸರ್ಕಾರದ ಭೂ ಸ್ವಾಧೀನ ಕಾಯಿದೆ ಬಗ್ಗೆ ಚಕಾರವೆತ್ತಿತ್ತು. ಈ ವೇಳೆ ಮಾತನಾಡಿದ ಮೋದಿ, ಚುನಾವಣೆಗೂ ಮುನ್ನ ಇದೇ ಕಾಯಿದೆಯನ್ನಿಟ್ಟುಕೊಂಡು ಕಾಂಗ್ರೆಸ್ ಲೋಕಸಭೆಯ ಚುನಾವಣಾ ಪ್ರಚಾರಕ್ಕಿಳಿದಿತ್ತು. ಆದರೆ ಜನರನ್ನು ಮರಳು ಮಾಡಲು ಸಾಧ್ಯವಾಗದ ಕಾರಣ ಕಾಂಗ್ರೆಸ್ ಸಂಪೂರ್ಣವಾಗಿ ಸೋಲನ್ನು ಅನುಭವಿಸಿದೆ. ಅಲ್ಲದೆ ಯುಪಿಎ ಸರ್ಕಾರ ಜಾರಿಗೆ ತಂದಿದ್ದ ನರೇಗಾ ಯೋಜನೆಯ ವೈಫಲ್ಯತೆ ಕಾಂಗ್ರೆಸ್‌ ಸೋಲಿಗೆ ಹಿಡಿದ ಕೈಗನ್ನಡಿ. ಯೋಜನೆಯನ್ನು ಕಾರ್ಯಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಆದರೂ ಅದರಲ್ಲಿ ಕೆಲ ವ್ಯತ್ಯಾಸಗಳನ್ನು ತಂದು ನಾವು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಿದ್ದೇವೆ ಎಂದರು. 
 
ಬಳಿಕ, ಯುಪಿಎ ಸರ್ಕಾರ ಬಡತನ ನಿರ್ಮೂಲನೆಗಾಗಿ ಜಾರಿಗೊಳಿಸಿದ್ದ ಮತ್ತೊಂದು ಯೋಜನೆ ಮನ್‌ರೇಗಾ ಯೋಜನೆಯನ್ನೂ ಕೂಡ ನಮ್ಮ ಸರ್ಕಾರ ಮುಂದುವರಿಸಲಿದ್ದು, ಬಡತನ ನಿರ್ಮೂಲನೆಯೇ ನಮ್ಮ ಗುರಿಯಾಗಿದೆ. ಅಲ್ಲದೆ ಬಡತನವನ್ನು ಕಿತ್ತೊಗೆಯಲು ನಮ್ಮ ಸರ್ಕಾರ ಕಟಿಬದ್ಧವಾಗಿದೆ ಎಂದರು. 
 
ಇದೇ ವೇಳೆ, ಸರ್ಕಾರದ ಮತ್ತೊಂದು ಮಹಾತ್ವಾಕಾಂಕ್ಷಿ ಯೋಜನೆಯಾಗಿರುವ ಸ್ವಚ್ಛ ಭಾರತ್ ಅಭಿಯಾನವನ್ನೂ ಕೂಡ ಸಮರ್ಪಕವಾಗಿ ಜಾರಿಗೊಳಿಸಿ ಯಶಸ್ಸು ಸಾಧಿಸಲಿದ್ದೇವೆ ಎಂದರು. 

ವೆಬ್ದುನಿಯಾವನ್ನು ಓದಿ