ಇಂದು ಬೆಂಗಳೂರಿಗೆ ಆಗಮಿಸಲಿರುವ ಮೋದಿ

ಮಂಗಳವಾರ, 23 ಸೆಪ್ಟಂಬರ್ 2014 (08:56 IST)
ಇಂದು ಪ್ರಧಾನಿ ಮೋದಿ ಬೆಂಗಳೂರಿಗೆ ಆಗಮಿಸಲಿದ್ದಾರೆ. ಪ್ರಧಾನಿಯಾಗಿ ಪದಗ್ರಹಣ ಮಾಡಿದ ನಂತರ ಅವರು ರಾಜ್ಯಕ್ಕೆ ನೀಡುತ್ತಿರುವ ಮೊದಲ ಭೇಟಿ ಇದಾಗಿದ್ದು ಬಿಜೆಪಿ ಪಾಳೆಯದಲ್ಲಿ ಉತ್ಸಾಹ ಗರಿಗೆದರಿದೆ.

ಸಂಜೆ 5.40 ಕ್ಕೆ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಮೋದಿಯವರನ್ನು ಸನ್ಮಾನಿಸಲು ಸಕಲ ಸಿದ್ಧತೆ ಮಾಡಲಾಗಿದ್ದು ಎಚ್ಎಎಲ್ ವಿಐಪಿ ಗೇಟ್ ಬಳಿ ವೇದಿಕೆ ಸಿದ್ಧಗೊಂಡಿದೆ. ಪ್ರಧಾನಿಯವರಿಗೆ ನಾಡ ಪ್ರಭು ಕೇಂಪೇಗೌಡ ಪ್ರತಿಮೆಯುಳ್ಳ ಸ್ಮರಣಿಕೆಯನ್ನು ನೀಡಲು ರಾಜ್ಯ ಬಿಜೆಪಿ ನಿರ್ಧರಿಸಿದೆ. ಕೇವಲ 30 ನಿಮಿಷದ ಕಾರ್ಯಕ್ರಮದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಲಿರುವ ಮೋದಿ 6.30 ಕ್ಕೆರಾಜಭವನಕ್ಕೆ ತೆರಳಲಿರುವ ಮೋದಿ ಇಂದು ರಾತ್ರಿ ಅಲ್ಲೇ ತಂಗಲಿದ್ದಾರೆ.
 
ನಾಳೆ ಮಂಜಾನೆ ಇಸ್ರೋ ಬಾಹ್ಯಾಕಾಶ ಕೇಂದ್ರಕ್ಕೆ ಭೇಟಿ ನೀಡಲಿರುವ ಅವರು   ಬಾಹ್ಯಾಕಾಶ ನೌಕೆ ಮಂಗಳ ಅಂಗಳಕ್ಕೆ ಸೇರುವ ಅದ್ಭುತ, ಹೆಮ್ಮೆಯ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ. ಅಲ್ಲಿಯ ವಿಜ್ಞಾನಿಗಳೊಡನೆ ಚರ್ಚೆ ನಡೆಸಿ 11 ಗಂಟೆ ಸುಮಾರಿಗೆ ತುಮಕೂರಿಗೆ ತೆರಳಿ ಫುಡ್ ಕೋರ್ಟ್ ಉದ್ಘಾಟಿಸಲಿದ್ದಾರೆ. 
 
ನಡೆದಾಡುವ ದೇವರು ಎಂದೇ ವಿಖ್ಯಾತರಾದ ಸಿದ್ಧಗಂಗಾ ಶ್ರೀಗಳ ಆಶೀರ್ವಾದ ಪಡೆಯಲಿರುವ ಮೋದಿಯವರು ಮಧ್ಯಾಹ್ನದ ಹೊತ್ತಿಗೆ ಎಚ್ಎಎಲ್ ವಿಮಾನ ನಿಲ್ದಾಣದಿಂದ ದೆಹಲಿಗೆ ವಾಪಸ್ಸಾಗಲಿದ್ದಾರೆ.
 
ಚುನಾವಣೆಗೆ ಮುನ್ನ ಭರವಸೆಯ ಮಹಾಪುರವನ್ನೇ ಹರಿಸಿದ್ದ ಮೋದಿ, ಪ್ರಧಾನಿಯಾಗಿ ಪ್ರಥಮ ಬಾರಿ ರಾಜ್ಯಕ್ಕೆ ಆಗಮಿಸುತ್ತಿದ್ದು ರಾಜ್ಯಕ್ಕೆ ಯಾವ ಕೊಡುಗೆಯನ್ನು ನೀಡಲಿದ್ದಾರೆ ಎಂದು ಕಾದು ನೋಡಬೇಕಿದೆ. 

ವೆಬ್ದುನಿಯಾವನ್ನು ಓದಿ