ಸರ್ಕಾರ ರಚನೆ ಸಂಬಂಧ ಮೋದಿ ಜೊತೆ ಮುಫ್ತಿ ಚರ್ಚೆ

ಶುಕ್ರವಾರ, 27 ಫೆಬ್ರವರಿ 2015 (11:19 IST)
ಪಿಡಿಪಿ ಮುಖ್ಯಸ್ಥ ಮುಫ್ತಿ ಮೊಹಮ್ಮದ್ ಸಯೀದ್ ಅವರು ಇಂದು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಸರ್ಕಾರಚನೆ ಸಂಬಂಧ ಅಧಿಕೃತವಾಗಿ ಚರ್ಚಿಸಿದ್ದಾರೆ. 
 
ನಗರದ 7ಆರ್ಸಿಆರ್ ಭವನದಲ್ಲಿ ಪ್ರಧಾನಿ ಅವರನ್ನು ಭೇಟಿಯಾಗಿದ್ದ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. ಕಳೆದ 2002ರಲ್ಲಿ ಮೋದಿ ಅವರು ಮುಕ್ಯಮಂತ್ರಿಯಾಗಿದ್ದ ವೇಳೆಯಲ್ಲಿ ನಾನು ಮೋದಿ ಅವರನ್ನು ಭೇಟಿಯಾಗಿದ್ದೆ. ಆದರೆ ಆ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ್ದು, ಸುಮಾರು 13 ವರ್ಷಗಳ ಬಳಿಕದ ಈ ಭೇಟಿ ಫಲಿಸಿದೆ ಎಂದರು. 
 
ಇದೇ ವೇಳೆ ಮಾತನಾಡಿರುವ ಅವರು, ರಾಜ್ಯದಲ್ಲಿ ಜನತೆ ಭಯದಿಂದ ಬದುಕಿದ್ದಾರೆ. ಹಾಗಾಗಿ ಮೊದಲು ಶಾಂತಿ ನೆಲೆಸಬೇಕು. ಹಾಗಾಗಬೇಕಾದರೆ ಸುಭದ್ರ ಸರ್ಕಾರ ರಚನೆಯಾಗಬೇಕಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ಪ್ರಧಾನಿ ಮೋದಿ ಅವರೊಂದಿಗೆ ಅಧಿಕೃತವಾಗಿ ಚರ್ಚಿಸಿದ್ದೇನೆ. ಪರಿಣಾಮ ಕೇವಲ ಎರಡು ದಿನಗಳಲ್ಲಿ ಸುಭದ್ರ ಮೈತ್ರಿ ಸರ್ಕಾರ ರಚನೆಯಾಗಲಿದೆ ಎಂದರು. 
 
ಇನ್ನು ಪ್ರಮಾಣವಚನ ಸಮಾರಂಭವು ಭಾನುವಾರ ನಡೆಯಲಿದ್ದು, ಪಿಡಿಪಿಯ 13 ಮಂದಿ ಹಾಗೂ ಬಿಜೆಪಿಯ 12 ಮಂದಿ ಶಾಸಕು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ. ಇನ್ನು ಮುಫ್ತಿ ಮೊಹಮ್ಮದ್ ಸಯ್ಯೀದ್ ಅವರೇ ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸುತ್ತಿದ್ದಾರೆ. ಸಮಾರಂಭಕ್ಕೆ ಪ್ರಧಾನಿ ಮೋದಿ ಕೂಡ ಆಗಮಿಸುವ ಸಾಧ್ಯತೆ ಇದೆ ಎನ್ನಲಾಗಿದೆ.  

ವೆಬ್ದುನಿಯಾವನ್ನು ಓದಿ