ಮುರ್ಡೇಶ್ವರ: ಪ್ರವಾಸಕ್ಕೆ ಬಂದ ಐವರು ಬೆಂಗಳೂರಿಗರು ಸಮುದ್ರಪಾಲು

ಭಾನುವಾರ, 27 ಜುಲೈ 2014 (15:13 IST)
ಉತ್ತರಕನ್ನಡದ ಭಟ್ಕಳ ತಾಲ್ಲೂಕಿನಲ್ಲಿರುವ ಪುರಾಣ ಪ್ರಸಿದ್ಧ ಮುರ್ಡೇಶ್ವರ ಪ್ರವಾಸಕ್ಕೆ ಬಂದಿದ್ದ ಬೆಂಗಳೂರಿನ ಕಾಮಾಕ್ಷಿ ಪಾಳ್ಯದ  ಐವರು ಪ್ರವಾಸಿಗರು ಸಮುದ್ರದಲ್ಲಿ ಕೊಚ್ಚಿ ಹೋದ ದಾರುಣ ಘಟನೆ ಶನಿವಾರ ಸಂಜೆ ನಡೆದಿದೆ. 

ಬೆಂಗಳೂರಿನ ಕಾಮಾಕ್ಷಿ ಪಾಳ್ಯದ ನಿವಾಸಿಗಳಾದ ಸಾವಿತ್ರಿ ರವಿಕುಮಾರ (37), ಸೌಮ್ಯಾ ರವಿಕುಮಾರ (16), ಭೂಮಿಕಾ ಪ್ರಕಾಶ (16)  ವಿಜಯ್‌ಕುಮಾರ್ (೩೦), ಸಿದ್ದರಾಮಣ್ಣ (೨೭) ಎಂದು ಗುರುತಿಸಲಾಗಿದೆ. 
 
ಒಟ್ಟು 18 ಜನರಿದ್ದ ತಂಡ ಟೆಂಪೋ ಒಂದರಲ್ಲಿ ಮುರ್ಡೇಶ್ವರ ಪ್ರವಾಸಕ್ಕೆ ಆಗಮಿಸಿತ್ತು. ದೇವಸ್ಥಾನಕ್ಕೆ ಭೇಟಿ ಕೊಟ್ಟು ದೇವರ ದರ್ಶನ ಪಡೆದ  ಬಳಿಕ ಎಲ್ಲರೂ ಸೇರಿ  ಸಮುದ್ರಕ್ಕೆ ಇಳಿದಿದ್ದಾರೆ. ಒಮ್ಮೆಲೆ ಬೃಹತ್ ಗಾತ್ರದ ಅಲೆಯೊಂದು ಅಪ್ಪಳಿಸಿ,  ಎಲ್ಲರೂ ನೀರಿನಲ್ಲಿ ಮುಳುಗಿದ್ದಾರೆ. 
 
ಆದರೆ ದುರ್ದೈವವಶಾತ್ ಸಾವಿತ್ರಿ ರವಿಕುಮಾರ, ಸೌಮ್ಯಾ ರವಿಕುಮಾರ, ಭೂಮಿಕಾ ರಮೇಶ ಸೇರಿ ಐವರು ಅಲೆಯ ಅಬ್ಬರಕ್ಕೆ  ಕೊಚ್ಚಿಕೊಂಡು ಹೋಗಿದ್ದಾರೆ. ಉಳಿದವರು ಸ್ಥಳೀಯರ ಸಮಯಪ್ರಜ್ಞೆಯಿಂದ ಬದುಕುಳಿದಿದ್ದಾರೆ. ಅವರಲ್ಲಿ ಸಾವಿತ್ರಿ ರವಿಕುಮಾರ ಹಾಗೂ ಸೌಮ್ಯಾ ಶವ ದೊರೆತಿದ್ದು, ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಭೂಮಿಕಾ ಪ್ರಕಾಶ ಹಾಗೂ ಉಳಿದಿಬ್ಬರ ಶವ ಪತ್ತೆಗಾಗಿ ಮೀನುಗಾರರು ಹಾಗೂ ಮುಳುಗುಗಾರರು ಹುಡುಕಾಟ ನಡೆಸಿದ್ದಾರೆ.
 
ರಕ್ಷಣೆಗಾಗಿ ನೀರಿಗೆ ಧುಮುಕಿದ್ದ ಗಗನ್ ಎಂಬಾತ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ನೀರುಪಾಲಾಗಲಿದ್ದ ರಮ್ಯಾ (೭), ಹೇಮಲತಾ (೧೩)ರನ್ನು ಸ್ಥಳೀಯರು ರಕ್ಷಿಸಿದ್ದಾರೆ. ಮೃತಪಟ್ಟ ಸಾವಿತ್ರಿ, ಸೌಮ್ಯ, ಭೂಮಿಕಾ ಒಂದೇ ಕುಟುಂಬದವರಾಗಿದ್ದಾರೆ ಮೃತ ಶರೀರಗಳನ್ನು ಮರಣೋತ್ತರ ಪರೀಕ್ಷೆಗಾಗಿ ಭಟ್ಕಳಕ್ಕೆ  ತರಲಾಗಿದೆ. ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೋಲಿಸರು ತನಿಖೆ ನಡೆಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ