ಮೈಸೂರು ಅರಮನೆಯಲ್ಲಿ ಮರುಕಳಿಸಿದ ರಾಜವೈಭವ: ಯದುವೀರ್‌ಗೆ ಪಟ್ಟಾಭಿಷೇಕ

ಗುರುವಾರ, 28 ಮೇ 2015 (10:20 IST)
ಮೈಸೂರು: ಮೈಸೂರಿನ ಅಂಬಾವಿಲಾಸ ಅರಮನೆಯಲ್ಲಿ ಮೈಸೂರಿನ ಯದುವಂಶದ ಉತ್ತರಾಧಿಕಾರಿ ಪಟ್ಟಾಭಿಷೇಕ ಮಹೋತ್ಸವ ವಿಜೃಂಭಣೆಯಿಂದ ನಡೆಯುವುದರೊಂದಿಗೆ ಮೈಸೂರಿನ ಅರಮನೆಯಲ್ಲಿ ರಾಜವೈಭವ ಮರುಕಳಿಸಿತು.  ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಪಟ್ಟಾಭಿಷೇಕದ ಹಿನ್ನೆಲೆಯಲ್ಲಿ ಅಂಬಾವಿಲಾಸ್ ಅರಮನೆಯಲ್ಲಿ ಸಂಭ್ರಮ, ಸಡಗರ ಮೇಳೈಸಿತ್ತು.

ಯದುವೀರ್ ಒಡೆಯರ್ ಭದ್ರಾಸನ ಪೂಜೆ ನೆರವೇರಿಸಿ ಬೆಳ್ಳಿಯ ಭದ್ರಾಸನವೇರಿ ಕುಳಿತರು. ರಾಜಮಾತೆ ಪ್ರವೋದಾದೇವಿ ಸಮ್ಮುಖದಲ್ಲಿ ರಾಜಪುರೋಹಿತರು ಮಹಾರಾಜರಿಗೆ ಪಟ್ಟಧಾರಣೆ ನಡೆಸಿದರು. ಯದುವೀರ್ ದಶದಾನ ನೆರವೇರಿಸಿದರು. ರಾಜಪುರೋಹಿತರು ಸಪ್ತನದಿಗಳ ನೀರನ್ನು ಮಹಾರಾಜರ ಮೇಲೆ ಪ್ರೋಕ್ಷಣೆ ಮಾಡಿದರು.

ರಾಜಪುರೋಹಿತರು ಪಟ್ಟಾಭಿಷೇಕರ ವಿಧಿವಿಧಾನಗಳನ್ನು ನೆರವೇರಿಸಿದರು. ಚಿನ್ನದ ಬಾಸಿಂಗವನ್ನು ಪುರೋಹಿತರು ಯದುವೀರ್‌ಗೆ ಕಟ್ಟಿದರು.   27ನೇ ಉತ್ತರಾಧಿಕಾರಿಯಾಗಿ ಯದುವೀರ್ ಪಟ್ಟಕ್ಕೆ ಏರುವ ಮೂಲಕ 41 ವರ್ಷಗಳ ಬಳಿಕ ಐತಿಹಾಸಿಕ ಕ್ಷಣಕ್ಕೆ ಮೈಸೂರು ಅರಮನೆ ಸಾಕ್ಷಿಯಾಯಿತು. 

ವೆಬ್ದುನಿಯಾವನ್ನು ಓದಿ