ಶಿವಮೊಗ್ಗದಲ್ಲೊಂದು ಮೈತ್ರಿ ಚಿಟ್ ಫಂಡ್: ಗ್ರಾಹಕರಿಗೆ 150 ಕೋಟಿ ಪಂಗನಾಮ...!

ಗುರುವಾರ, 18 ಡಿಸೆಂಬರ್ 2014 (11:48 IST)
ಇಲ್ಲಿನ ಮೈತ್ರಿ ಪ್ಲಾಂಟೇಶನ್ ಅಂಡ್ ಹಾರ್ಟಿಕಲ್ಚರ್ ಎಂಬ ಚಿಟ್ ಫಂಡ್ ಸಂಸ್ಥೆಯೊಂದು ಇಲ್ಲಿನ ಕೇಂದ್ರ ಕಚೇರಿಗೆ ರಾತ್ರೋರಾತ್ರಿ ಬೀಗ ಜಡಿದು ಪರಾರಿಯಾಗುವ ಮೂಲಕ ತನ್ನ ಗ್ರಾಹಕರಿಗೆ ಸುಮಾರು 150 ಕೋಟಿ ರೂ. ಗಳಷ್ಟು ಬಹು ದೊಡ್ಡ ಮೊತ್ತದ ಹಣವನ್ನು ವಂಚಿಸಿದೆ. 
 
ಇದನ್ನು ಕಂಡ ವಂಚನೆಗೊಳಗಾದ ಗ್ರಾಹಕರು ಮಾಧ್ಯಮಗಳ ಮುಂದೆ ತಮ್ಮ ನೋವನ್ನು ತೋಡಿಕೊಂಡಿದ್ದು, 1000ಕ್ಕೆ 2000, 2000ಕ್ಕೆ ನಾಲ್ಕು ಸಾವಿರ ಹೀಗೆ ನಮ್ಮ ಹೂಡಿಕೆ ಹಣಕ್ಕೆ ಡಬಲ್ ಹೂಡಿಕೆ ಹಣ ನೀಡುವುದಾಗಿ ಆಮಿಷ ಹುಟ್ಟು ಹಾಕಿದ್ದ ಸಂಸ್ಥೆ, ನಮ್ಮಿಂದ ಸುಮಾರು 150 ಕೋಟಿ ಹಣ ಹೂಡಿಕೆ ಮಾಡಿಕೊಳ್ಳಲಾಗಿತ್ತು. ಅಲ್ಲದೆ ಇದಕ್ಕೆ ಸಂಬಂಧಿಸಿದಂತೆ ನಮಗೆ ಹಣ ಹೂಡಿಕೆ ಮಾಡಿದ್ದೀರಿ ಎಂಬ ನಿದರ್ಶನಕ್ಕೆ ಬಾಂಡ್ ಕೂಡ ಕೊಡಲಾಗಿತ್ತು. ಆದರೆ ಇಂದು ಬೆಳ್ಳಂ ಬೆಳಗ್ಗೆ ಕಚೇರಿಗೆ ಬೀಗ ಜಡಿದಿದ್ದನ್ನು ಕಂಡ ಗ್ರಾಹಕರು ಮಾಧ್ಯಮಗಳ ಮುಂದೆ ತಮ್ಮ ನೋವು ತೋಡಿಕೊಂಡಿದ್ದಾರೆ. ಈ ವೇಳೆ, ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿದ್ದಾರೆ. 
 
ಕಂಪನಿಯ ಮುಖ್ಯ ಕಚೇರಿ ಇದೇ ಕಚೇರಿಯಾಗಿದ್ದು, ಸುಮಾರು 25000 ಕ್ಕೂ ಅಧಿಕ ಗ್ರಾಹಕರು ಇಲ್ಲಿ ವ್ಯವಹರಿಸುತ್ತಿದ್ದರು. ಆದರೆ ಪ್ರಸ್ತುತ ಇವರೆಲ್ಲರೂ ಮೋಸಕ್ಕೊಳಗಾಗಿದ್ದಾರೆ ಎನ್ನಲಾಗಿದೆ. ಇನ್ನು ಕಂಪನಿಯ ಇತರೆ ಕೇಂದ್ರ ಕಚೇರಿಗಳು ಚಿತ್ರದುರ್ಗ ಹಾಗೂ ತುಮಕೂರು ನಗರದಲ್ಲಿದೆ ಎನ್ನಲಾಗಿದೆಯಾದರೂ ಸೂಕ್ತ ಮಾಹಿತಿ ಇಲ್ಲ. ಕಂಪನಿಯ ಕಾರ್ಯನಿರ್ವಹಣೆಯನ್ನು ಮಹಾದೇವಪ್ಪ ಎಂಬುವವರು ನೋಡಿಕೊಳ್ಳುತ್ತಿದ್ದರು ಎಂದು ಮೋಸಕ್ಕೊಳಗಾದ ಗ್ರಾಹಕರು ತಿಳಿಸಿದ್ದಾರೆ. 
 
ಹಣ ಕಳೆದುಕೊಂಡಿರುವ ಗ್ರಾಹಕರು ಹಣಕ್ಕೆ ಹಣ ಸಿಗದೇ ಹೋದರೂ ಕಟ್ಟಿದ್ದ ಸಾವಿರಾರು ರೂಪಾಯಿಗಳನ್ನೂ ಕಳೆದುಕೊಂಡು ಪ್ರಸ್ತುತ ಕೈ ಕೈ ಹಿಸುಕಿಕೊಳ್ಳುವಂತಾಗಿದೆ. 

ವೆಬ್ದುನಿಯಾವನ್ನು ಓದಿ