ವೀರ ಸೇನಾನಿ ಕೊಪ್ಪದ್‌ಗೆ ಭಾವಪೂರ್ಣ ವಿದಾಯ

ಶುಕ್ರವಾರ, 12 ಫೆಬ್ರವರಿ 2016 (13:49 IST)
ಜಮ್ಮು-ಕಾಶ್ಮೀರದ ಸಿಯಾಚಿನ್‌‌ನಲ್ಲಿ ಕಳೆದ ವಾರ ಸಂಭವಿಸಿದ ಭೀಕರ ಹಿಮಪಾತದಲ್ಲಿ ಪವಾಡ ಸದೃಶರಾಗಿ ಬದುಕುಳಿದು ಬಂದು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ವೀರ ಸೇನಾನಿ, ಲ್ಯಾನ್ಸ್‌ ನಾಯಕ  ಹನುಮಂತಪ್ಪ ಕೊಪ್ಪದ ಮಣ್ಣಲ್ಲಿ ಮಣ್ಣಾಗಿದ್ದಾರೆ.  ಅವರ ಹುಟ್ಟೂರು ಬೆಟದೂರಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಇಂದು ಮಧ್ಯಾಹ್ನ 1.15ಕ್ಕೆ ಅಂತ್ಯಕ್ರಿಯೆಯನ್ನು ನಡೆಸಲಾಯಿತು.

ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ಹುಟ್ಟೂರು ಬೆಟದೂರಿನ ಕೆರೆಯ ದಡದಲ್ಲಿ ಕುಶಾಲತೋಪು ಹಾರಿಸಿ ಸಕಲ ಮಿಲಿಟರಿ ಹಾಗೂ ಸರ್ಕಾರಿ ಗೌರವಗಳೊಂದಿಗೆ ವೀರಶೈವ ಸಂಪ್ರದಾಯದಂತೆ ಅಂತಿಮ ವಿಧಾನಗಳನ್ನು ನೆರವೇರಿಸಲಾಯಿತು.
ಕೊಪ್ಪದ್ ಅಣ್ಣ ಗೋವಿಂದ್ ಕೊಪ್ಪದ್ ಅಂತಿಮ ವಿಧಿ ವಿಧಾನ ನೆರವೇರಿಸಿದರು.
 
ಹುಬ್ಬಳಿಯ ನೆಹರು ಮೈದಾನದಲ್ಲಿ ಇಂದು ಬೆಳಿಗ್ಗೆ 7.30 ರಿಂದ 10 ಗಂಟೆಯವರೆಗೆ ಅಂತಿಮ ದರ್ಶನಕ್ಕೆ ಇಟ್ಟ ಬಳಿಕ ಪಾರ್ಥಿವ ಶರೀರವನ್ನು ಹುಟ್ಟೂರಿಗೆ ಕೊಂಡೊಯ್ಯಲಾಗಿತ್ತು. ಅಂತಿಮ ವಿಧಿವಿಧಾನಗಳನ್ನು ಪೂರೈಸಿ ಬೆಟದೂರು ಸರ್ಕಾರಿ ಶಾಲಾ ಆವರಣಲ್ಲಿ ಗ್ರಾಮಸ್ಥರಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಿ ಬಳಿಕ ಅಂತ್ಯಕ್ರಿಯೆ ನಡೆಸುವ ಸ್ಥಳಕ್ಕೆ ರವಾನಿಸಲಾಯಿತು. 
 
ಹನುಮಂತಪ್ಪ ಅಮರ್ ರಹೇ, ಹುತಾತ್ಮ ಕೊಪ್ಪದ್‌ಗೆ ಜೈ ಎಂದು ಘೋಷಣೆ ಕೂಗುವ ಮೂಲಕ ಜನರು ಅಭಿಮಾನವನ್ನು ಪ್ರದರ್ಶಿಸಿದರು. ಬೆಟದೂರಿನ ಗ್ರಾಮಸ್ಥರು. ಸಂಪೂರ್ಣ ದೇಶ ಶೋಕ ಸಾಗರದಲ್ಲಿ ಮುಳುಗಿದ್ದರೆ, ಕೊಪ್ಪದ್ ಪತ್ನಿ, ತಾಯಿ ಸೇರಿದಂತೆ ಪರಿವಾರದವರ ಗೋಳಾಟ ಮುಗಿಲು ಮುಟ್ಟಿತ್ತು. ಪಾರ್ಥಿವ ಶರೀರದ ಅಂತಿಮ ಯಾತ್ರೆಯಲ್ಲಿ ಕೊಪ್ಪದ್ ಪತ್ನಿ ಮಹಾದೇವಿ ಕುಸಿದು ಬಿದ್ದರು. 
 
ಕುಟುಂಬಸ್ಥರು, ರಾಜಕೀಯ ನಾಯಕರು, ಸೇನಾಧಿಕಾರಿಗಳು ಸೇರಿದಂತೆ ಸಾವಿರಾರು ಜನರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಅಂತಿಮ ನಮನವನ್ನು ಸಲ್ಲಿಸಿದರು. 

ವೆಬ್ದುನಿಯಾವನ್ನು ಓದಿ