ಮರ ತೆರವು ಕಾರ್ಯದಲ್ಲಿ ನಿರ್ಲಕ್ಷ್ಯ: ಅಧಿಕಾರಿಗಳಿಗೆ ರಾಮಲಿಂಗಾರೆಡ್ಡಿ ತರಾಟೆ

ಶನಿವಾರ, 2 ಮೇ 2015 (11:37 IST)
ನಗರದಲ್ಲಿ ಭಾರೀ ಮಳೆಯಿಂದಾಗಿ ಮರಗಳು ಧರೆಗುರುಳಿದ್ದು, ಅವುಗಳನ್ನು ಇನ್ನೂ ಕೂಡ ತೆರವುಗೊಳಿಸದ ಕಾರಣ ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಅವರು ಬಿಬಿಎಂಪಿ ಆಯುಕ್ತ ಕುಮಾರ್ ನಾಯಕ್ ಹಾಗೂ ಆಡಳಿತಾಧಿಕಾರಿ ಬಿ.ಎಂ.ವಿಜಯ್ ಭಾಸ್ಕರ್ ಅವರಿಗೆ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. 
 
ಹೌದು, ಅಧಿಕಾರಿಗಳಿಗೆ ಇಂದು ದೂರವಾಣಿ ಕರೆ ಮಾಡಿದ್ದ ಸಚಿವರು, ಮರಗಳು ಬಿದ್ದು 36 ಗಂಟೆಗಳು ಕಳೆದಿದ್ದರೂ ಕೂಡ ಪ್ರಸ್ತುತ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಏಕೆ ಎಂದು ಪ್ರಶ್ನಿಸಿದ ಅವರು, ಮರಗಳ ತೆರವಾಗದ ಕಾರಣ ಸಾರ್ವಜನಿಕರ ಪ್ರಯಾಣಕ್ಕೆ ತೊಂದರೆಯಾಗುತ್ತಿದ್ದು, ಇಂದು ಸಂಜೆಯೊಳಗೆ ಬಿದ್ದಿರುವ ಎಲ್ಲಾ ಮರಗಳನ್ನು ತೆರವುಗೊಳಿಸಿ. ಅಲ್ಲದೆ ಅಲ್ಲಲ್ಲಿ ವಿದ್ಯುತ್ ಕಂಬಗಳೂ ಕೂಡ ಧರೆಗುರುಳಿರುವ ಸಂಗತಿ ತಿಳಿದು ಬಂದಿದೆ. ಅದನ್ನೂ ಸರಿಪಡಿಸಿ ಎಂದು ಆದೇಶಿಸಿದರು. 
 
ಇದೇ ವೇಳೆ, ನಾಳೆ ನಾನು ನಗರ ಪ್ರದಕ್ಷಿಣೆಗೆ ತೆರಳುತ್ತಿದ್ದು, ಆ ವೇಳೆಗೆ ಯಾವುದೇ ಸಮಸ್ಯೆಗಳು ಕಣ್ಣಿಗೆ ಬೀಳಬಾರದು. ಇಲ್ಲವಾದಲ್ಲಿ ಪರಿಣಾಮ ಎದುರಿಸಬೇಕಾದೀತು ಎಂದು ಎಚ್ಚರಿಸಿದ್ದಾರೆ. 
 
ನಗರದಲ್ಲಿ ಕಳೆದ ಗುರುವಾರ ಸುರಿದಿದ್ದ ಧಾರಾಕಾರ ಮಳೆ ಪರಿಣಾಮ ಜಯನಗರ, ವಿಲ್ನ್ಗಾರ್ಡನ್, ಲಕ್ಕಸಂದ್ರ, ಡಬಲ್ ರೋಡ್, ನ್ಯಾಯಂಡನಹಳ್ಳಿ, ಹೊಂಬೇಗೌಡ ರಸ್ತೆ ಸೇರಿದಂತೆ ನಗರದೆಲ್ಲೆಡೆ 400ಕ್ಕೂ ಅಧಿಕ ಮರಗಳು ಉರುಳಿ ಬಿದ್ದಿದ್ದವು. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ಕೆಲವೆಡೆ ತೆರವುಗೊಳಿಸಿದ್ದರೆ ಇನ್ನೂ ಕೆಲವೆಡೆ ತೆರವುಗೊಳಿಸಲಾಗಿಲ್ಲ. ಈ ಹಿನ್ನೆಲೆಯಲ್ಲಿ ಸಚಿವರು ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡಿದ್ದಾರೆ.  
 

ವೆಬ್ದುನಿಯಾವನ್ನು ಓದಿ