ನೇಪಾಳ ಭೂಕಂಪ: ಸುರಕ್ಷಿತವಾಗಿ ತಾಯ್ನಾಡು ಸೇರಿದ 17 ಮಂದಿ ಕನ್ನಡಿಗರು

ಮಂಗಳವಾರ, 28 ಏಪ್ರಿಲ್ 2015 (12:00 IST)
ನೇಪಾಳ ಪ್ರವಾಸ ಕೈಗೊಂಡು ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿದ್ದ ನಗರದ ಹನುಮಂತನಗರದ 17 ಮಂದಿ ನಿವಾಸಿಗಳು ಇಂದು ತಮ್ಮ ತಾಯ್ನಾಡಿಗೆ ವಾಪಾಸಾಗಿದ್ದಾರೆ. 
 
ಬೆಳಗ್ಗೆ ವಿಮಾನವೇರಿ ದೆಹಲಿಯಿಂದ ನಗರದ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಈ ತಂಡ, ತಮ್ಮ ಕುಂಟುಂಬಸ್ಥರನ್ನು ಭೇಟಿಯಾಗಿ ಸಂತಸ ವ್ಯಕ್ತಪಡಿಸಿತು. ಅಲ್ಲದೆ ಪ್ರಾಣಾಪಾಯದಿಂದ ಪಾರಾಗಿ ಸುರಕ್ಷಿತವಾಗಿ ತಾಯ್ನಾಡಿಗೆ ಸೇರಿದ ಸಂತಸ ಅವರುಗಳ ಕಣ್ಣಲ್ಲಿ ಮನೆ ಮಾಡಿತ್ತು. 
 
ಘಟನೆ ವಿವರ: ನೇಪಾಳದಲ್ಲಿ ಕಳೆದ ಏಪ್ರಿಲ್ 25ರಿಂದ ಪದೇ ಪದೇ ಭೂಕಂಪನ ಸಂಭವಿಸುತ್ತಿದ್ದು, ಈ ಎಲ್ಲರೂ ಕೂಡ ನೇಪಾಳ ಪ್ರವಾಸಕ್ಕೆಂದು ತೆರಳಿ ಭೂಕಂಪನಕ್ಕೆ ಸಿಲುಕಿಕೊಂಡಿದ್ದರು. ಬಳಿಕ ಇವರನ್ನು ಭಾರತೀಯ ರಕ್ಷಣಾ ಪಡೆಗಳು ಕಾರ್ಯಾಚರಣೆ ನಡೆಸುವ ಮೂಲಕ ರಕ್ಷಿಸಿ ಸುರಕ್ಷಿತವಾಗಿ ನಿನ್ನೆ ನವದೆಹಲಿಗೆ ಸೇರಿಸಿದ್ದವು. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ದೆಹಲಿಯನ್ನು ಬಿಟ್ಟಿದ್ದ ಈ ಕನ್ನಡಿಗರು, ಪ್ರಸ್ತುತ ಬೆಂಗಳೂರು ಸೇರಿದ್ದಾರೆ. ಇವರು ಕಲೆದ ಏಪ್ರಿಲ್ 23ರಂದು ನೇಪಾಳ ಪ್ರವಾಸ ಕೈಗೊಂಡಿದ್ದರು ಎನ್ನಲಾಗಿದೆ. 
 
ಇನ್ನು ಇವರಲ್ಲದೆ ಇನ್ನೂ 26 ಮಂದಿ ಇರುವ ಕನ್ನಡಿಗರ ಮತ್ತೊಂದು ತಂಡ ದೆಹಲಿಯಲ್ಲಿದ್ದು, ಅವರಿನ್ನು ಅಲ್ಲಿನ ಕರ್ನಾಟಕ ಭವನದಲ್ಲಿಯೇ ತಂಗಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದ್ದು, ಇಂದು ರಾತ್ರಿ ಅಥವಾ ನಾಳೆ ರಾಜ್ಯಕ್ಕೆ ಆಗಮಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ನಿನ್ನೆ ಒಟ್ಟು 43 ಮಂದಿಯನ್ನು ರಕ್ಷಿಸಲಾಗಿತ್ತು. 

ವೆಬ್ದುನಿಯಾವನ್ನು ಓದಿ