ಭಗ್ನಪ್ರೇಮಿ ಆತ್ಮಹತ್ಯೆಗೆ ಹೊಸ ಟ್ವಿಸ್ಟ್: ಡಬಲ್ ಗೇಮ್ ಆಡಿದಳಾ ಅತ್ತಿಗೆ?

ಶುಕ್ರವಾರ, 13 ಮೇ 2016 (15:50 IST)
ಕಳೆದ ಮೇ 7 ರಂದು ಹಾಸನದ ಉತ್ತರ ಬಡಾವಣೆಯಲ್ಲಿ ನಡೆದ ಭಗ್ನಪ್ರೇಮಿ ರಾಘವೇಂದ್ರ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ರಾಘವೇಂದ್ರನ ಅತ್ತಿಗೆಯ ಡಬಲ್ ಗೇಮ್ ಈ ಸಾವಿಗೆ ಕಾರಣವಾಗಿದೆ ಎಂಬ ದಂಗು ಬಡಿಸುವ ಸತ್ಯ ಹೊರಬಿದ್ದಿದೆ. 
 
ಕ್ಯಾಬ್ ಮಾಲೀಕನಾಗಿದ್ದ ರಾಘವೇಂದ್ರನಿಗೆ ಫೋನ್‌ನಲ್ಲಿ ಯುವತಿಯೋರ್ವಳ ಪರಿಚಯವಾಗಿತ್ತು. ತನ್ನ ಹೆಸರು ಅನು, ಕಾಲೇಜು ಉಪನ್ಯಾಸಕಿ ಎಂದು ಪರಿಚಯಿಸಿಕೊಂಡಿದ್ದ ಆಕೆ ಫೇಸ್‌ಬುಕ್‌ನಲ್ಲಿ ತಮಿಳು ನಟಿ ಮೋನಲ್ ಪೋಟೋವನ್ನು ಹಾಕಿ ಅದು ತನ್ನ ಫೋಟೋ ಎಂದು ನಂಬಿಸಿದ್ದಳು. ಕಳೆದ 7 ತಿಂಗಳಿಂದ ಅವರಿಬ್ಬರು ಗಂಟೆಗಟ್ಟಲೆ ಮಾತನಾಡುತ್ತಿದ್ದರು. ಆದರೆ ಒಂದು ದಿನವೂ ಭೇಟಿಯಾಗಿರಲಿಲ್ಲ.
 
ಕಳೆದ ಒಂದು ತಿಂಗಳ ಹಿಂದೆ ಯುವತಿ ಮದುವೆಗೆ ತನ್ನ ಅಣ್ಣ ಅಡ್ಡಿಯಾಗಿದ್ದಾನೆ ಎಂದು ಯುವತಿ ತಿಳಿಸಿದ್ದಾಳೆ. ಇದರಿಂದ ಖಿನ್ನನಾದ ರಾಘವೇಂದ್ರ  ಕಳೆದ ವಾರ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ. ಆದರೆ ಅದರಲ್ಲಿ ತನ್ನ ಪ್ರೇಮಿಯ ಬಗ್ಗೆ ಯಾವುದೇ ಸುಳಿವು ನೀಡಿರಲಿಲ್ಲ. ಹೀಗಾಗಿ ಪೊಲೀಸರಿಗೆ ಈ ಪ್ರಕರಣ ಬಿಡಿಸಲಾಗದ ಒಗ್ಗಟ್ಟಾಗಿ ಪರಿಣಮಿಸಿತ್ತು. 
 
ಆದರೆ ಈಗ ದಂಗು ಬಡಿಸುವ ಸತ್ಯವೊಂದು ಬಯಲಾಗಿದೆ. ಆತನ ಸ್ವಂತ ಅಣ್ಣನ ಪತ್ನಿಯೇ ಡಬಲ್ ಗೇಮ್ ಆಡಿ, ಅಮಾಯಕನ ಸಾವಿಗೆ ಕಾರಣಳಾಗಿದ್ದಾಳೆ ಎಂದು ತಿಳಿದು ಬಂದಿದೆ. 
 
ರಾಘವೇಂದ್ರನ ಅತ್ತಿಗೆ ದಿವ್ಯಾ ಕಳೆದ ಕೆಲ ವರ್ಷಗಳ ಹಿಂದೆ ಪತಿಯಿಂದ ದೂರವಾಗಿ ವಾಸಿಸುತ್ತಿದ್ದು, ಮೈದುನ ಸತ್ತ ದಿನ ಗಂಡನ ಮನೆಗೆ ಬಂದು ಶೋಕದ ನಾಟಕವಾಡಿದ್ದಳು. ಮರುದಿನ ಆಕೆ ರಾಘವೇಂದ್ರ ಪ್ರೀತಿಸಿದ ಹುಡುಗಿ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾಳಂತೆ. ತನಗೆ ಫೋನ್ ಬಂದಿತ್ತು ಎಂದು ತನ್ನ ಸಂಬಂಧಿಕರ ಬಳಿ ಹೇಳಿಕೊಂಡಿದ್ದಳು. ಅವಳು ಯಾರು ಎಂದು ಕೇಳಿದರೆ ಮಾಹಿತಿ ನೀಡಲು ನಿರಾಕರಿಸಿ ಕುಂಟು ನೆಪ ಹೇಳಿದ್ದಳು. ಆ ದಿನ ಸಂಜೆ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳಂತೆ ಎಂದು ಹೇಳುವುದರ ಮೂಲಕ ಆಕೆ ಮತ್ತೊಂದು ಬಾಂಬ್ ಸಿಡಿಸಿದ್ದಳು. ಈ ಕುರಿತು ಪೊಲೀಸರಿಗೆ ವಿಚಾರಿಸಿದಾಗ ರಾಘವೇಂದ್ರ ಸತ್ತನೆಂಬ ಕಾರಣಕ್ಕೆ ಯುವತಿ ಆತ್ಮಹತ್ಯೆ ಮಾಡಿಕೊಂಡ ಯಾವ ಸಂಗತಿಯೂ ಬೆಳಕಿಗೆ ಬಂದಿಲ್ಲ ಎಂದು ತಿಳಿಸಿದ್ದಾರೆ. ಇದರಿಂದ ಎಲ್ಲರ ಅನುಮಾನ ಬಲವಾಗಿದೆ. ಆದರೆ ಆ ಕುರಿತು ಯಾವ ದಾಖಲೆಯೂ ಇರಲಿಲ್ಲ
 
ಬಳಿಕ ರಾಘವೇಂದ್ರ ಡೆತ್ ನೋಟ್‌ನಲ್ಲಿ ಬರೆದಿದ್ದ ಎರಡು ಫೋನ್ ನಂಬರ್ ಪರಿಶೀಲಿಸಿದಾಗ ಅವೆರಡು ಆತನ ಅತ್ತಿಗೆ ದಿವ್ಯಾಳದ್ದೇ ಎಂಬ ದಂಗು ಬಡಿಸುವ ಸತ್ಯ ಹೊರಬಿದ್ದಿದೆ. ಅತ್ತಿಗೆ ದಿವ್ಯಾಳೇ ಮೈದುನನ ಜತೆ ಪ್ರೇಮದ ನಾಟಕವಾಡಿದ್ದಳು ಎಂದು ಹೇಳಲಾಗುತ್ತಿದೆ. ಆಕೆಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.
 
ಒಟ್ಟಿನಲ್ಲಿ ಅತ್ತಿಗೆ ಡಬಲ್ ಗೇಮ್ ಮೈದುನನ ಸಾವಿಗೆ ಕಾರಣವಾಗಿರುವುದು ವಿಪರ್ಯಾಸ.

ವೆಬ್ದುನಿಯಾವನ್ನು ಓದಿ