ನಿರ್ಭಯಾ ಸಾಕ್ಷ್ಯಚಿತ್ರ ಪ್ರಸಾರ ನಿಷೇಧ ವಿಚಾರ: ಸಭೆ ಕರೆದ ರಾಜನಾಥ್

ಬುಧವಾರ, 4 ಮಾರ್ಚ್ 2015 (18:34 IST)
ನಿರ್ಭಯಾ ಪ್ರಕರಣದ ಆರೋಪಿ ಮುಖೇಶ್ ಸಿಂಗ್ ಅವರ ಸಂದರ್ಶನವಿರುವ ಸಾಕ್ಷ್ಯಚಿತ್ರವನ್ನು ಪ್ರಸಾರ ಮಾಡಬಾರದೆಂದು ನಿಷೇಧ ಹೇರಿದ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಇಂದು ತಮ್ಮ ಇಲಾಖೆಯ ಉನ್ನತಾಧಿಕಾರಿಗಳ ಸಭೆ ಕರೆದಿದ್ದು, ಚರ್ಚಿಸುತ್ತಿದ್ದಾರೆ. 
 
ಸಚಿವರು ಸಭೆಯಲ್ಲಿ ವಿವಾದಿತ ಸಾಕ್ಷ್ಯಚಿತ್ರವು ಮಾಧ್ಯಮಗಳಲ್ಲಿ ಪ್ರಸಾರವಾಗದಂತೆ ಯಾವ ರೀತಿ, ಹೇಗೆ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸುತ್ತಿದ್ದಾರೆ ಎನ್ನಲಾಗಿದ್ದು, ರಾತ್ರಿ ವೇಳೆಗೆ ಸಭೆ ಅಂತ್ಯವಾಗಲಿದೆ ಎನ್ನಲಾಗಿದೆ. 
 
ಇನ್ನು ಪ್ರಕರಣ ಸಂಬಂಧ ತಯಾರಿಸಲಾಗಿರುವ ಸಾಕ್ಷ್ಯಚಿತ್ರವನ್ನು ಪ್ರಸಾರ ಮಾಡದಂತೆ ಮಾಧ್ಯಮಗಳ ಮೇಲೆ ಸರ್ಕಾರ ಹೇರಿದ್ದ ನಿರ್ಬಂಧವನ್ನು ದೆಹಲಿ ಹೈಕೋರ್ಟ್ ಕೂಡ ಎತ್ತಿ ಹಿಡಿದಿದ್ದು, ಕೇಂದ್ರ ಗೃಹ ಇಲಾಖೆಗೆ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಎಚ್ಚರದಿಂದಿರುವಂತೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿಯೇ ಸಚಿವರು ಸಭೆ ಕರೆದಿದ್ದಾರೆ ಎನ್ನಲಾಗಿದೆ. 
 
ಇನ್ನು ಸಬೆಯಲ್ಲಿ ದೆಹಲಿ ನಗರ ಪೊಲೀಸ್ ಆಯುಕ್ತ ಸಿ.ಪಿ.ಬಸ್ಸೀ, ದೆಹಲಿ ಉಪ ರಾಜ್ಯಪಾಲ ನಜೀಬ್ ಜಂಗ್, ತಿಹಾರ್ ಜೈಲಿನ ಡಿಜಿ ಅಲೋಕ್ ವರ್ಮಾ ಸೇರಿದಂತೆ ಇಲಾಖೆಯ ಇತರೆ ಗಣ್ಯರು ಪಾಲ್ಗೊಂಡಿದ್ದಾರೆ ಎಂದು ತಿಳಿದು ಬಂದಿದೆ. 
 
ಪ್ರಕರಣದ ಹಿನ್ನೆಲೆ: ಪ್ರಕರಣದ ಆರೋಪಿಗಳಲ್ಲೋರ್ವನಾಗಿರುವ ಮುಖೇಶ್ ಸಿಂಗ್(ಬಸ್ ಚಾಲಕ) ಎಂಬಾತನನ್ನು ಇತ್ತೀಚೆಗೆ ದೃಶ್ಯ ಮಾಧ್ಯಮ ವಾಹಿನಿ ಬಿಬಿಸಿಯು ವರದಿಗಾರರು ಜೈಲಿನಲ್ಲಿಯೇ ಸಂದರ್ಶನ ನಡೆಸಿದ್ದರು. ಈ ವೇಳೆ ಆರೋಪಿ ಸಿಂಗ್, ಅತ್ಯಾಚಾರ ಎಸಗುವಾಗ ಅವಳು(ನಿರ್ಭಯಾ) ವಿರೋಧಿಸದೆ ಸಹಕರಿಸಿದ್ದಿದ್ದರೆ ಅವಳನ್ನು ಅಮಾನುಷವಾಗಿ ಹತ್ಯೆ ಮಾಡುತ್ತಿರಲಿಲ್ಲ. ಅಲ್ಲದೆ ಸಭ್ಯ ಮಹಿಳೆಯರು ರಾತ್ರಿ 9 ಗಂಟೆ ವೇಳೆಯಲ್ಲಿ ಅಲೆಯುವುದು ಸರಿಯಲ್ಲ. ಅತ್ಯಾಚಾರ ವಿಷಯದಲ್ಲಿ ಯುವತಿಗೂ ಕೂಡ ಯುವಕನಷ್ಟೇ ಜವಾಬ್ದಾರಿ ಇರುತ್ತದೆ. ಯುವತಿಯರಿಗೆ ಮನೆಗೆಲಸ ಮೀಸಲಾಗಿದೆ. ಆದರೆ ಅದನ್ನು ಬಿಟ್ಟು ಡಿಸ್ಕೋಗಳಲ್ಲಿ, ಬಾರ್‌ಗಳಲ್ಲಿ ಯುವಕರ ಜೊತೆ ಅಲೆಯುತ್ತಾರೆ. ಅಲ್ಲದೆ ಅಶ್ಲೀಲ ಉಡುಪುಗಳನ್ನು ಧರಿಸುವುದು ಸರಿಯಲ್ಲ ಎಂದು ಹೇಳಿಕೆ ನೀಡಿದ್ದ. 
 
ಈ ಸಂದರ್ಶನದ ತುಣುಕನ್ನು ಮಾರ್ಚ್ 8ನ್ನು ಅಂತಾರಾಷ್ಟ್ರೀಯ ಮಹಿಳಾ ದಿನವನ್ನಾಗಿ ಆಚರಿಸಲಾಗುವ ಹಿನ್ನೆಲೆಯಲ್ಲಿ ಅಂದು ಪ್ರಸಾರ ಮಾಡುವುದಾಗಿ ವಾಹಿನಿ ತಿಳಿಸಿತ್ತು. ಆದರೆ ಇದಕ್ಕೆ ಕೇಂದ್ರ ಸರ್ಕಾರ ತಡೆಯೊಡ್ಡಿದೆ. 

ವೆಬ್ದುನಿಯಾವನ್ನು ಓದಿ