ಸಚಿವ ಸಂಪುಟ ಪುನಾರಚನೆ ಪ್ರಸ್ತಾಪ ಸದ್ಯಕ್ಕಿಲ್ಲ: ಸಿದ್ದರಾಮಯ್ಯ

ಗುರುವಾರ, 31 ಜುಲೈ 2014 (15:03 IST)
ಹೈಕಮಾಂಡ್ ಹೇಳಿದರೆ ಮಾತ್ರ ಸಚಿವ ಸಂಪುಟ ವಿಸ್ತರಿಸುವೆ. ಸಂಪುಟ ಪುನಾರಚನೆ ಪ್ರಸ್ತಾಪ ನನ್ನ ಮುಂದೆ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
 
ಈ ಮೂಲಕ ಹಲವು ದಿನಗಳಿಂದ ಚರ್ಚೆಯಾಗುತ್ತಿದ್ದ ಸಂಪುಟ ಪುನಾರಚನೆ ಪ್ರಸ್ತಾಪಕ್ಕೆ ತೆರೆ ಎಳೆದಿದ್ದಾರೆ. ವಿಧಾನಸೌಧದಲ್ಲಿ ನಡೆದ ಶುದ್ಧ ಕುಡಿಯುವ ನೀರು ಘಟಕಗಳ ಉದ್ಘಾಟನಾ ಕಾರ್ಯಕ್ರಮದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು ಬುಧವಾರ ಈ ವಿಷಯ ತಿಳಿಸಿದ್ದಾರೆ. 
 
ಸಂಪುಟ ಪುನಾರಚನೆ ಮಾಡುವುದಾಗಿ ನಾನು ಎಲ್ಲಿಯೂ ಹೇಳಿಲ್ಲ. ಇದೆಲ್ಲ ಊಹಾಪೋಹ. ಸಂಪುಟದಲ್ಲಿ ನಾಲ್ಕು ಸ್ಥಾನಗಳು ಖಾಲಿ ಇವೆ. ಅದನ್ನು ಭರ್ತಿ ಮಾಡುತ್ತೇನೆ ಎಂದರು. 
 
ಸಂಪುಟ ವಿಸ್ತರಣೆ ವಿಧಾನಸಭಾ ಉಪಚುನಾವಣೆ ಮುನ್ನವೋ, ನಂತರವೋ ಎಂಬ ಸುದ್ದಿಗಾರರ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡದ ಅವರು, ಈ ಬಗ್ಗೆ ನಾನು ಹೈಕಮಾಂಡ್ ಜತೆ ಚರ್ಚೆ ನಡೆಸಬೇಕು. ಇದುವರೆಗೆ ಯಾವುದೇ ಚರ್ಚೆಗಳು ನಡೆದಿಲ್ಲ. ಯಾರನ್ನು ಸಂಪುಟಕ್ಕೆ ತೆಗೆದುಕೊಳ್ಳಬೇಕು ಎಂಬ ವಿಚಾರವೂ ನನ್ನ ಮುಂದೆ ಇಲ್ಲ. ಹೈಕಮಾಂಡ್ ಯಾವಾಗ ಹೇಳುತ್ತದೋ, ಆಗ ಸಂಪುಟ ವಿಸ್ತರಿಸುವೆ ಎಂದರು.
 
ಸರ್ಕಾರದ ವಿರುದ್ಧ ಅಲ್ಲ: ಗುರುವಾರ ಕನ್ನಡ ಸಂಘಟನೆಗಳು ಬೆಂಗಳೂರು ಬಂದ್‌ಗೆ ಕರೆ ನೀಡಿರುವುದು ಸರ್ಕಾರದ ವಿರುದ್ಧ ಅಲ್ಲ. ಅತ್ಯಾಚಾರದಂಥ ಘೋರ ಅಪರಾಧ ಎಸಗುವ ಪಾತಕಿಗಳ ವಿರುದ್ಧ ಎಂದರು. ನಗರದ ಖಾಸಗಿ ಶಾಲೆಯಲ್ಲಿ 6 ವರ್ಷದ ಬಾಲಕಿ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಿಬಿಐ ತನಿಖೆ ಅಗತ್ಯವಿಲ್ಲ. ಈ ಪ್ರಕರಣದ ತನಿಖೆ ನಡೆಸುವುದಕ್ಕೆ ಬೆಂಗಳೂರು ನಗರ ಪೊಲೀಸರು ಸಮರ್ಥರಿದ್ದಾರೆ. ಆರೋಪಿಗಳಿಗೆ ಶಿಕ್ಷೆಯಾಗುತ್ತದೆ ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ