ಬಡಾವಣೆ ನಿರ್ಮಾಣದ ಬಗ್ಗೆ ಬಿಡಿಎ ಬಳಿಯೇ ದಾಖಲೆಗಲಿಲ್ಲ...?!

ಮಂಗಳವಾರ, 5 ಮೇ 2015 (15:53 IST)
ನಗರದಲ್ಲಿನ ಕೆರೆ ಒತ್ತುವರಿಗೆ ಸಂಬಂಧಿಸಿದಂತೆ ಇಂದು ರಾಜ್ಯದ ಉಪ ಲೋಕಾಯುಕ್ತರ ನೇತೃತ್ವದಲ್ಲಿ ಸಭೆ ನಡೆದಿದ್ದು,ಕೆರೆ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದ ಬಿಡಿಎ 14 ಬಡಾವಣೆಗಳನ್ನು ನಿರ್ಮಿಸಿದೆ ಎಂಬ ಮಾಹಿತಿ ತಿಳಿದು ಬಂದಿದೆ. 
 
ಸಭೆಯ ಬಳಿಕ ಮಾತನಾಡಿದ ಉಪ ಲೋಕಾಯುಕ್ತ ಸುಭಾಷ್ ಡಿ.ಆಡಿ, ಬಿಡಿಎ ವತಿಯಿಂದ ಕೆರೆ ಒತ್ತುವರಿ ಮಾಡಿಕೊಂಡು ಒಟ್ಟು 14 ಬಡಾವಣೆಗಳನ್ನು ನಿರ್ಮಿಸಲಾಗಿದೆ. ಈ ಪೈಕಿ 3500 ಸೈಟ್‌ಗಳನ್ನೂ ಕೂಡ ಹಂಚಿಕೆ ಮಾಡಲಾಗಿದೆ. ಒಟ್ಟು 14 ಬಡಾವಣೆಗಳಲ್ಲಿ ಮೂರು ಬಡಾವಣೆಗಳಿಗೆ ಮಾತ್ರ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಅಕ್ರಮವನ್ನು ಸಕ್ರಮಗೊಳಿಸಿದೆ. ಆದರೆ ಉಳಿದ 11 ಬಡಾವಣೆಗಳನ್ನು ಸಕ್ರಮಗೊಳಿಸಲಾಗಿಲ್ಲ. ಅಲ್ಲದೆ ಇದಕ್ಕೆ ಸಂಬಂಧಿಸಿದಂತೆ ಬಿಡಿಎ ಬಳಿಯೂ ಕೂಡ ಯಾವುದೇ ದಾಖಲೆಗಳಿಲ್ಲ. ಆದ್ದರಿಂದ ಈ ಎಲ್ಲವೂ ಕೂಡ ಅಕ್ರಮವಾಗಿದ್ದು, ಇವುಗಳ ಬಗ್ಗೆ ಸರ್ಕಾರದ ಮಟ್ಟದಲ್ಲೇ ತೀರ್ಮಾನ ಕೈಗೊಳ್ಳಬೇಕಿದೆ ಎಂದರು. 
 
ಬಳಿಕ, ಮೂರು ಬಡಾವಣೆಗಳ ಸಕ್ರಮಕ್ಕಾಗಿ ಸರ್ಕಾರವು 2011ರಲ್ಲಿ ಅಧಿಸೂಚನೆಯನ್ನು ಹೊರಡಿಸಿದ್ದು, ಬಿಳೇಕಹಳ್ಳಿ, ಜಕ್ಕಸಂದ್ರ ಮತ್ತು ಸಿನಿವಾಗಿಲು ಬಡಾವಣೆಗಳನ್ನು ಸಕ್ರಮಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.  
 
ಇನ್ನು ಹೆಚ್ಎಎಲ್ 3ನೇ ಹಂತ, ಹೆಚ್‌ಬಿಆರ್ ಲೇಔಟ್, ಸಿನಿವಾಗಿಲು, ಬಿಳೇಕಹಳ್ಳಿ, ಹೆಚ್ಎಸ್ಆರ್ ಲೇಔಟ್ 3 ನೇ ಹಂತ, ಬನಶಂಕರಿ ಮೂರನೇ ಹಂತ, ನಾರಗಭಾವಿ 13 ನೇ ಸ್ಟೇಜ್ 2 ನೇ ಬ್ಲಾಕ್ ಸೇರಿದಂತೆ ಇನ್ನಿತರೆ ಬಡಾವಣೆಗಳು ಪಟ್ಟಿಯಲ್ಲಿವೆ. 
 
ಇನ್ನು ಈ ಸಂಬಂಧ ಪ್ರತಿಕ್ರಿಯಿಸಿರುವ ಬಿಡಿಎ ಅಧಿಕಾರಿಗಳು, ಈ ವಿಷಯದಲ್ಲಿ ಸರ್ಕಾರದ ಮುಂದಿನ ಕ್ರಮವೇನು ಎಂಬ ಬಗ್ಗೆ ಸರ್ಕಾರದ ಎಜಿ ಪ್ರೊ.ರವಿವರ್ಮ ಕುಮಾರ್ ಅವರೊಂದಿಗೆ ಮಾತುಕತೆ ನಡೆಸಿ ಚರ್ಚಿಸುವುದಾಗಿ ತಿಳಿಸಿದ್ದಾರೆ. 
 
ಈ ಬಗ್ಗೆ ನಾಳೆ ಕೂಡ ಸಭೆ ಕರೆದಿರುವ ಉಪ ಲೋಕಾಯುಕ್ತರು, ನಗರಾಭಿವೃದ್ಧಿ ಹಾಗೂ ಕಂದಾಯ ಇಲಾಖೆಯ ಉನ್ನತಾಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದು, ಮುಂದಿನ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ.   
 
ಸಭೆಯು ಉಪ ಲೋಕಾಯುಕ್ತರ ನೇತೃತ್ವದಲ್ಲಿ ನಡೆದಿದ್ದು, ಸಭೆಯಲ್ಲಿ ಬಿಡಿಎಯ ಉನ್ನತಾಧಿಕಾರಿಗಳು ಭಾಗವಹಿಸಿದ್ದರು. 

ವೆಬ್ದುನಿಯಾವನ್ನು ಓದಿ