ಸಭೆಯಲ್ಲಿ ಹೊಡೆದಾಟಗಳು ನಡೆದೇ ಇಲ್ಲ: ಎಎಪಿ ವಕ್ತಾರ ಸಿಂಗ್ ಹೇಳಿಕೆ

ಶನಿವಾರ, 28 ಮಾರ್ಚ್ 2015 (15:46 IST)
ಎಎಪಿ ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ಮುಂದುವರಿದಿದ್ದು, ಇಂದು ಬೆಳಗ್ಗೆ ನಡೆದ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಯಾವುದೇ ರೀತಿಯ ಗಲಾಟೆ ಅಥವಾ ಹೊಡೆದಾಟಗಳು ನಡೆದೇ ಇಲ್ಲ ಎಂದು ಪಕ್ಷದ ವಕ್ತಾರ ಸಂಜಯ್ ಸಿಂಗ್ ತಿಳಿಸಿದ್ದಾರೆ. 
 
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಕ್ಷದ ಕಾರ್ಯಕಾರಿಣಿ ಸಭೆಯು ಸುಸೂತ್ರವಾಗಿ ನಡೆದಿದ್ದು, ಯಾವುದೇ ರೀತಿಯ ಗಲಾಟೆ ಅಥವಾ ಹೊಡೆದಾಟಗಳು ಸಂಭವಿಸಿಲ್ಲ. ಅಗತ್ಯವಿದ್ದಲ್ಲಿ ನಾವು ಸಾಕ್ಷ್ಯಗಳನ್ನು ಒದಗಿಸಲು ಸಿದ್ಧರಿದ್ದೇವೆ ಎಂದರು. 
 
ಬಳಿಕ, ಸದಸ್ಯರ ಒಟ್ಟು ಬಲ 300 ಇದ್ದು, ಆ ಪೈಕಿ 242 ಮಂದಿ ಯೋಗೇಂದ್ರ ಯಾದವ್ ಹಾಗೂ ಪ್ರಶಾಂತ್ ಭೂಷಣ್ ವಿರುದ್ಧ ಮತ ಚಲಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಯಾದವ್ ಹಾಗೂ ಭೂಷಣ್ ಇಬ್ಬರನ್ನೂ ಕೂಡ ಪಕ್ಷದ ಸದಸ್ಯತ್ವ ಸ್ಥಾನದಿಂದ ಉಚ್ಛಾಟಿಸಲಾಗಿದೆ. ಇವರ ಜೊತೆಗೆ ಆನಂದ್ ಕುಮಾರ್ ಹಾಗೂ ಅಜಯ್ ಝಾ ಅವರನ್ನೂ ಕೂಡ ಉಚ್ಛಾಟಿಸಲಾಗಿದೆ. ಆದರೆ, ಯಾದವ್ ನನ್ನ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಲಾಗಿದೆ ಎಂದು ಹೇಳುತ್ತಿರುವುದೆಲ್ಲವೂ ಸತ್ಯಕ್ಕೆ ದೂರವಾದ ಮಾತು ಎಂದು ಹೇಳಿದರು. 
 
ಇಂದು ನಡೆದ ಕಾರ್ಯಕಾರಿಣಿ ಸಭೆ ಬಳಿಕ ಪ್ರತಿಕ್ರಿಯಿಸಿದ್ದ ಎಎಪಿ ಸಂಸ್ಥಾಪಕ ಸದಸ್ಯರಾಗಿದ್ದ, ಉಚ್ಛಾಟಿತ ಸದಸ್ಯ ಯೋಗೇಂದ್ರ ಯಾದವ್ ಅವರು, ಕಾರ್ಯಕಾರಿಣಿ ಸಭೆ ನಡೆಯುತ್ತಿದ್ದ ವೇಳೆ ನಮ್ಮ ಬೆಂಬಲಿಗರು ನಮ್ಮನ್ನು ಉಚ್ಛಾಟನೆ ಮಾಡಬಾರದು ಎಂದು ಸ್ವಲ್ಪ ಗದ್ದಲ ನಿರ್ಮಿಸಿದರು. ಈ ವೇಳೆ ಗದ್ದಲವೇ ಗಲಾಟೆಯಾಗಿ ಪರಿಣಮಿಸಿತು. ಗಲಾಟೆಯ ನಡುವೆಯೂ ನಮ್ಮ ಉಚ್ಛಾಟನಾ ನಿರ್ಣಯವನ್ನು ನಾಯಕರು ಮಂಡಿಸಿದರು. ಆದರೆ ಈ ವೇಳೆ ನಮ್ಮ ಹಾಗೂ ನಮ್ಮ ಬೆಂಬಲಿಗರ ಮೇಲೆ ಎಎಪಿ ನಾಯಕರು ಚಪ್ಪಲಿ ಎಸೆದು ಅಪಮಾನ ಮಾಡಿದರು ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಸಂಜಯ್ ಸಿಂಗ್ ಈ ರೀತಿಯಾಗಿ ಹೇಳಿಕೆ ನೀಡಿದ್ದಾರೆ. 

ವೆಬ್ದುನಿಯಾವನ್ನು ಓದಿ