ಮಠಗಳ ವಿವಾದದಲ್ಲಿ ಸರ್ಕಾರ ಮಧ್ಯ ಪ್ರವೇಶವಿಲ್ಲ: ಜಯಚಂದ್ರ ಸ್ಪಷ್ಟನೆ

ಸೋಮವಾರ, 22 ಡಿಸೆಂಬರ್ 2014 (14:05 IST)
ಮಠಗಳ ಸ್ವಾಯತ್ತತೆಗೆ ಧಕ್ಕೆ ತರುವಂತಹ ಯಾವುದೇ ವಿಚಾರ ಸರ್ಕಾರದ ಮುಂದಿಲ್ಲ. ಆದರೆ ಇರುವ ಕಾನೂನಿಗೆ ತಿದ್ದುಪಡಿ ತರಲು ಸರ್ಕಾರ ಚಿಂತಿಸುತ್ತಿದೆ. ಮಠಗಳ ಸಮಸ್ಯೆಗಳಲ್ಲಿ ಸರ್ಕಾರ ಮಧ್ಯ ಪ್ರವೇಶ ಮಾಡುವುದನ್ನು ಬಯಸುವುದಿಲ್ಲ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಸ್ಪಷ್ಟಪಡಿಸಿದ್ದಾರೆ. 
 
ಇತ್ತೀಚೆಗೆ ಮಠಗಳಲ್ಲಿ ಕೆಲವು ಆಡಳಿತಾತ್ಮಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದ್ದು, ಈಗಾಗಲೇ ಹಲವು ದೂರುಗಳೂ ಕೂಡ ಜಗಜ್ಜಾಹೀರಾಗುತ್ತಿವೆ. ಈ ಹಿನ್ನಲೆಯಲ್ಲಿ ಮಠಗಳನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಅಥವಾ ಮಧ್ಯ ಪ್ರವೇಶಿಸುವಲ್ಲಿ ಸರ್ಕಾರವೇನಾದರೂ ಮುಂದಾಗಿದೆಯೇ ಎಂದು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಸ್ತುತ ಅಂತಹ ನಿರ್ಧಾರಗಳಿಗೆ ಸರ್ಕಾರ ಮುಂದಾಗಿಲ್ಲ. ಅಲ್ಲದೆ ಮಠಗಳ ಆಸ್ತಿ ಸಾರ್ವಜನಿಕರ ಆಸ್ತಿಯಾಗಿದ್ದು, ಏನಾದರೂ ಸರ್ಕಾರ ಮಧ್ಯ ಪ್ರವೇಶಿಸುವುದು ಅಗತ್ಯತೆ ಇದ್ದು, ಅನಿವಾರ್ಯ ಎನಿಸಿದಲ್ಲಿ ಮಧ್ಯ ಪ್ರವೇಶಿಸಲಿದೆ. ಆದರೆ ಮುಟ್ಟುಗೋಲು ಹಾಕಿಕೊಳ್ಳುವಂತಹ ಯಾವುದೇ ವಿಚಾರ ಸರ್ಕಾರದ ಮುಂದಿಲ್ಲ ಎಂದು ಸ್ಪಷ್ಟಪಡಿಸಿದರು. 
 
ಇದೇ ವೇಳೆ ಮಾತನಾಡಿದ ಅವರು, ಈಗಾಗಲೇ ಸುಪ್ರೀಂ ಕೋರ್ಟ್ ಮಠಗಳಿಗೆ ಸಂಬಂಧಿಸಿದಂತೆ ಸೂಕ್ತ ನಿಯಮವನ್ನು ಜಾರಿಗೊಳಿಸುವಂತೆ ರಾಜ್ಯ ಸರ್ಕಾರಗಳಿಗೆ ನಿರ್ದೇಶಿಸಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರವೂ ಕೂಡ ಇರುವ ಕಾನೂನಿಗೇ ತಿದ್ದುಪಡಿ ತಂದು ಸುತ್ತೋಲೆ ಹೊರಡಿಸುವಲ್ಲಿ ಚಿಂತಿಸುತ್ತಿದೆ ಎಂದರು. 
 
ಇತ್ತೀಚೆಗೆ ಧಾರವಾಡದ ಮೂರು ಸಾವಿರ ಮಠದ ಪೀಠಾಧ್ಯಕ್ಷರ ವಿವಾದ, ರಾಘವೇಂದ್ರ ಮಠದ ವಿವಾದ ಹಾಗೂ ನಿತ್ಯಾನಂದನ ಬಿಡದಿ ಆಶ್ರಮ ವಿವಾದ ಸೇರಿದಂತೆ ಮಠಗಳಿಗೆ ಸಂಬಂಧಿಸಿದಂತೆ ಹಲವು ರೀತಿಯ ವಿವಾದಗಳು ಕೇಳಿ ಬಂದಿದ್ದವು. ಈ ಹಿನ್ನಲೆಯಲ್ಲಿ ಮಾಧ್ಯಮಗಳು ಸಚಿವರಿಂದ ಸರ್ಕಾರದ ನಿರ್ಧಾರವನ್ನು ಕಲೆಹಾಕಲು ಯತ್ನಿಸಿವೆ ಎನ್ನಲಾಗಿದೆ. 

ವೆಬ್ದುನಿಯಾವನ್ನು ಓದಿ