ಪದಾಧಿಕಾರಿಗಳ ನೇಮಕದಲ್ಲಿ ಹಸ್ತಕ್ಷೇಪವಿಲ್ಲ, ಸಾಬೀತಾದ್ರೆ ರಾಜಕೀಯ ಸನ್ಯಾಸ: ಕರಂದ್ಲಾಜೆ

ಗುರುವಾರ, 30 ಜೂನ್ 2016 (15:10 IST)
ಪದಾಧಿಕಾರಿಗಳ ನೇಮಕದಲ್ಲಿ ಹಸ್ತಕ್ಷೇಪ ನಡೆಸಿಲ್ಲ. ಒಂದು ವೇಳೆ ನಾನು ಹಸ್ತಕ್ಷೇಪ ನಡೆಸಿದ್ದು ಸಾಬೀತು ಪಡಿಸಿದ್ರೆ ರಾಜಕೀಯದಿಂದ ಸನ್ಯಾಸ ತೆಗೆದುಕೊಳ್ಳುವುದಾಗಿ ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
 
ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರಿಗೆ 40 ವರ್ಷದ ರಾಜಕೀಯ ಅನುಭವವಿದೆ. ಅವರು ತಮ್ಮ ರಾಜಕೀಯ ಅನುಭವದಿಂದ ಅರ್ಹ ಕಾರ್ಯಕರ್ತರನ್ನು ಪದಾಧಿಕಾರಿಗಳನ್ನಾಗಿ ನೇಮಕ ಮಾಡಿದ್ದಾರೆ ಎಂದರು.
 
ಬಿಜೆಪಿ ಪಕ್ಷದ ಹೈಕಮಾಂಡ್ ಯಾವ ಜವಾಬ್ದಾರಿ ನೀಡುತ್ತದೆಯೋ ಆ ಕೆಲಸವನ್ನು ಮಾತ್ರ ನಾನು ಮಾಡುತ್ತೇನೆ. ಇತರರ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವದಿಲ್ಲ ಎಂದು ಸ್ಪಷ್ಟಪಡಿಸಿದರು. ಪ್ರತಿಯೊಂದು ಘಟನೆಗೂ ನನ್ನನ್ನು ಹೊಣೆಯನ್ನಾಗಿ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
 
ಪದಾಧಿಕಾರಿಗಳ ಒಂದೊಂದು ಸ್ಥಾನಕ್ಕೂ 15-20 ಆಕಾಂಕ್ಷಿಗಳಿರುತ್ತಾರೆ. ಪ್ರತಿಯೊಬ್ಬರಿಗೂ ಪದಾಧಿಕಾರಿಯಾಗುವ ಆಸೆಯಿರುತ್ತದೆ. ಆದರೆ ಒಂದು ಸ್ಥಾನಕ್ಕೆ ಒಬ್ಬರನ್ನು ಮಾತ್ರ ನೇಮಿಸಲು ಸಾಧ್ಯ. ಪದಾಧಿಕಾರಿಗಳ ನೇಮಕವಾದಾಗ ಸಣ್ಣಪುಟ್ಟ ಗೊಂದಲಗಳು ಎದುರಾಗುವುದು ಸಹಜ. ಅದನ್ನು ನಿಭಾಯಿಸಲು ಬಿಜೆಪಿ ರಾಜ್ಯಾಧ್ಯಕ್ಷರು ಸಮರ್ಥವಾಗಿದ್ದಾರೆ ಎಂದಪ ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ