ನಮ್ಮನ್ನು ಯಾರೂ ಕಿಡ್ನ್ಯಾಪ್ ಮಾಡಿಲ್ಲ: ಕೊಲ್ಲಂನಲ್ಲಿರುವ ಬಂಡಾಯ ಸದಸ್ಯರ ಹೇಳಿಕೆ

ಶುಕ್ರವಾರ, 4 ಸೆಪ್ಟಂಬರ್ 2015 (16:10 IST)
ಈ ಹಿಂದೆ ಬಿಬಿಎಂಪಿ ಚುನಾವಣೆಗೆ ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಸ್ಥಾನ ಸಿಗಲಿಲ್ಲವೆಂದು ಬೇಸರಗೊಂಡು ಬಂಡಾಯ ಅಭ್ಯರ್ಥಿಗಳಾಗಿ ಕಣಕ್ಕಿಳಿದು ಜಯ ಗಳಿಸಿರುವ ಆರು ಮಂದಿ ಕಾರ್ಪೊರೇಟರ್‌ಗಳು ಕೇರಳದ ಕೊಲ್ಲಂ ನಗರದಲ್ಲಿ ಪ್ರತ್ಯಕ್ಷರಾಗಿದ್ದು, ನಮ್ಮನ್ನು ಯಾರೂ ಕೂಡ ಅಪಹರಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 
 
ಮಾಧ್ಯಮಗಳೊಂದಿಗೆ ಮಾತನಾಡಿದ ಆರೂ ಮಂದಿ ಕಾರ್ಪೊರೇಟರ್‌ಗಳು, ನಾವು ಈ ಮೊದಲು ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳಿಂದ ಸ್ಪರ್ಧಿಸಿ ಜಯ ಸಾಧಿಸಿದ್ದೆವು. ಆದರೆ ಅದೇ ಪಕ್ಷಗಳು ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ನಮಗೆ ಸೀಟು ನೀಡಿದೆ ವಂಚಿಸಿದವು. ಇದರಿಂದ ಬೇಸರಗೊಂಡು ಬಂಡಾಯ ಅಭ್ಯರ್ಥಿಗಳಾಗಿ ಕಣಕ್ಕಿಳಿದು ಜಯ ಗಳಿಸಿದ್ದೇವೆ ಎಂದರು. 
 
ಬಳಿಕ, ನಮ್ಮನ್ನು ಯಾರೂ ಕೂಡ ಅಪಹರಿಸಿಲ್ಲ. ನಾವೇ ಖುದ್ದು ಕೊಲ್ಲಂ ನಗರಕ್ಕೆ ಬಂದಿದ್ದೇವೆ. ಈ ಹಿಂದೆ ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡಲು ತೆರಳಿದ್ದೆವು. ಆದರೆ ಅವರು ತಮ್ಮನ್ನು ಕ್ಯಾರೇ ಎನ್ನಲಿಲ್ಲ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದೇವೆ. ಏಕೆಂದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದು, ನಮ್ಮ ಕ್ಷೇತ್ರವನ್ನು ಅಭಿವೃದ್ಧಿ ಮಾಡಿಕೊಳ್ಳಲು ಸಹಾಯವಾಗುತ್ತದೆ ಎಂಬ ಕಾರಣದಿಂದ ಪ್ರಸ್ತುತ ಕಾಂಗ್ರೆಸ್‌ನ್ನು ಬೆಂಬಲಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು. 
 
ಆರು ಮಂದಿ ಬಂಡಾಯ ಅಭ್ಯರ್ಥಿಗಳು ಯಾರು?:
-ಹೊಯ್ಸಳನಗರ ವಾರ್ಡ್‌ ಸದಸ್ಯ-ಆನಂದ್ ಕುಮಾರ್.
-ಸಗಾಯ್ ಪುರಂ ವಾರ್ಡ್ ಸದಸ್ಯ-ಏಳುಮಲೈ. 
-ಕೋನೇನ ಅಗ್ರಹಾರ ವಾರ್ಡ್ ಸದಸ್ಯ-ಚಂದ್ರಪ್ಪ ರೆಡ್ಡಿ. 
-ಮಾರುತಹಳ್ಳಿ ವಾರ್ಡ್ ಸದಸ್ಯ-ಎನ್.ರಮೇಶ್, 
-ಕೆಂಪಾಪುರ ಅಗ್ರಹಾರ ಸದಸ್ಯೆ-ಎನ್.ಗಾಯತ್ರಿ ಹಾಗೂ ಆನಂದ ಕುಮಾರ್ ಅವರೇ ಆಗಿದ್ದಾರೆ. 

ವೆಬ್ದುನಿಯಾವನ್ನು ಓದಿ