ಅಧಿವೇಶನದಲ್ಲಿ ಉ.ಕರ್ನಾಟಕಕ್ಕೆ ಲಾಭವಿಲ್ಲ: ಶೆಟ್ಟರ್ ಸರ್ಕಾರದ ಮೇಲೆ ವಾಗ್ದಾಳಿ

ಶನಿವಾರ, 20 ಡಿಸೆಂಬರ್ 2014 (17:08 IST)
ಇಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನ ಇಂದಿಗೆ ಅಂತೇಯಗೊಂಡಿದ್ದು, ಸರ್ಕಾರಕ್ಕೆ ಯಶಸ್ವಿ ಪ್ರಯತ್ನ ಎನಿಸಿದ್ದರೆ, ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಸರ್ಕಾರವನ್ನು ಬೇಜವಾಬ್ದಾರಿ, ಮೊಂಡುತನದ ಸರ್ಕಾರ ಎನ್ನುವ ಮೂಲಕ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 
 
ಕಲಾಪ ಮುಗಿದ ಬಳಿಕ ಪ್ರತಿಕ್ರಿಯಿಸಿರುವ ಶೆಟ್ಟರ್, ಭ್ರಷ್ಟರ ಬಗ್ಗೆ ಚರ್ಚೆಯಾಗಲಿಲ್ಲ ಎಂಬ ಕೊರಗಿದೆ ಎಂದು ಮಾತನ್ನು ಆರಂಭಿಸಿ ಸರ್ಕಾರವನ್ನು ಬೇಜವಾಬ್ದಾರಿ ಸರ್ಕಾರ ಎನ್ನುವ ಮೂಲಕ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 
 
ಉತ್ತರ ಕರ್ನಾಟಕದ ಜನರು ಸಾಕಷ್ಟು ಸಮಸ್ಯೆಗಳಿಂದ ಬಳಲುತ್ತಿದ್ದು, ಸರ್ಕಾರಕ್ಕೆ ಈ ಭಾಗದ ಅಭಿವೃದ್ಧಿಯತ್ತ ಕಿಂಚಿತ್ತೂ ಕೂಡ ಅಭಿಮಾನ ತೋರಿಸುತ್ತಿಲ್ಲ. ಈ ಮೂಲಕ ಇಡೀ ಉತ್ತರ ಕರ್ನಾಟಕಕ್ಕೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅನ್ಯಾಯ ಎಸಗುತ್ತಿದೆ. ಅಧಿವೇಶನದಲ್ಲಿ ಈ ಭಾಗದ ಜನರಿಗೆ ವಿಶೇಷ ಪ್ಯಾಕೇಜ್‌ನ್ನು ಘೋಷಿಸಬಹುದೆಂಬ ನಿರೀಕ್ಷೆಯಲ್ಲಿದ್ದೆವು. ಆದರೆ ಅದು ಹುಸಿಯಾಯಿತು. ಇನ್ನು ಕಬ್ಬು ಬೆಳೆಗಾರರಿಗೆ ಪ್ಯಾಕೇಜ್ ಇಲ್ಲ. ಹತ್ತಿ, ರಾಗಿ, ಜೋಳ ಹಾಗೂ ಇನ್ನಿತರೆ ಬೆಳೆಗಳಿಗೆ ಪ್ರೋತ್ಸಾಹ ಧನ ಅಥವಾ ಬೆಂಬಲ ಬೆಲೆ ನಿಗಧಿಪಡಿಸಿಲ್ಲ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು. 
 
ಇನ್ನು ನಿಮ್ಮ ಹಕ್ಕೊತ್ತಾಯ ಸಮರ್ಪಕವಾಗಿತ್ತೆ ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ಹಕ್ಕೋತ್ತಾಯ ಸಮರ್ಪಕವಾಗಿಯೇ ಇತ್ತು. ಆದರೆ ಸರ್ಕಾರ ದಿವಾಳಿಯಾಗಿದೆ. ಇದರಿಂದ ಆಡಳಿತ ನಡೆಸಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಇದು ಮೊಂಡುತನದ ಸರ್ಕಾರ, ಈ ಸರ್ಕಾರಕ್ಕೆ ಕಣ್ಣು ಕಿವಿ ಹಾಗೂ ಬಾಯಿಲ್ಲ. ಅಲ್ಲದೆ ಕಳಂಕಿಚರ ಬಗ್ಗೆ ಚರ್ಚಿಸಲು ಅವಕಾಶ ನೀಡಿಲ್ಲ. ಒಟ್ಟಾರೆಯಾಗಿ ಹೇಳುವುದಾದರೆ ಸರ್ಕಾರ ನಮಗೆ ಪೂರಕವಾಗಿ ಸ್ಪಂಧಿಸಲೇ ಇಲ್ಲ. ಸರ್ಕಾರದ ಅಸಹಕಾರ ಕಣ್ಣಿಗೆ ಕಟ್ಟುವಂತೆ ಎದ್ದು ಕಾಣುತ್ತಿದ್ದು, ಪ್ಯಾಕೇಜ್ ಘೋಷಿಸದ ಕಾರಣ ನಿರಾಶೆಯಾಗಿ ಸದನದಿಂದ ಹೊರ ಹೋಗುತ್ತಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದರು. 

ವೆಬ್ದುನಿಯಾವನ್ನು ಓದಿ