48 ದಿನಗಳ ಹೋರಾಟಕ್ಕಿಲ್ಲ ಫಲ: ಕಾನೂನು ಸಮರಕ್ಕೆ ಸಿದ್ಧನಾದ ಅನ್ನದಾತ

ಮಂಗಳವಾರ, 1 ಸೆಪ್ಟಂಬರ್ 2015 (15:27 IST)
ಕಳಸಾ ಬಂಡೂರಿ ಯೋಜನೆಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ಕಳೆದ 48 ದಿನಗಳಿಂದ ಹೋರಾಟ ನಡೆಸುತ್ತಿದ್ದರೂ ಕೂಡ ಫಲ ಪ್ರಾಪ್ತವಾಗದ ಪರಿಣಾಮ ಯೋಜನೆಯ ಹೋರಾಟ ಸಮಿತಿಯು ಅಂತಿಮವಾಗಿ ಕಾನೂನು ಹೋರಾಟ ನಡೆಸಲು ಸಿದ್ಧವಾಗಿದೆ.
 
ಹೌದು, ಈ ಸಂಬಂಧ ಹೋರಾಟ ಸಮಿತಿ ಅಧ್ಯಕ್ಷ ವಿಜಯ್ ಕುಲಕರ್ಣಿ ಅವರು ಪ್ರತಿಕ್ರಿಯಿಸಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಪ್ರಧಾನಿ ಮೋದಿ ಅವರು ಮಧ್ಯಂತರ ಆದೇಶವನ್ನು ತರುವ ಮೂಲಕ ಕನಿಷ್ಟ 7.5 ಟಿಎಂಸಿ ನೀರನ್ನು ಒದಗಿಸಲಿ ಎಂದು ಒತ್ತಾಯಿಸಿದರು. 
 
ಇದೇ ವೇಳೆ, ರಾಜ್ಯದಿಂದ ಕೇಂದ್ರಕ್ಕೆ ನಿಯೋಗ ಹೋದರೂ ಕೂಡ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ಬರುವ ಸೆಪ್ಟಂಬರ್ 5 ರಂದು ರಾಜ್ಯದ ಹಿರಿಯ ನ್ಯಾಯವಾದಿಗಳೊಂದಿಗೆ ಸಭೆ ನಡೆಸುತ್ತಿದ್ದು, ಸಭೆಯಲ್ಲಿ ವಕೀಲರ ಸಂಘದ ಅಧ್ಯಕ್ಷ ಪಿ.ಪಿ.ಹೆಗ್ಗಡೆ ಅವರು ಕಾನೂನು ಸಲಹೆಗಳನ್ನು ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಸಲಹೆಗಳನ್ನು ಪಡೆದು ಕಾನೂನು ಹೋರಾಟಕ್ಕಿಲಿಯಲಿದ್ದೇವೆ ಎಂದರು. 
 
ಈ ಯೋಜನೆಯನ್ನು ಜಾರಿಗಳಿಸುವಂತೆ ಕೇಂದ್ರಕ್ಕೆ ಮನವಿ ಮಾಡಲು ರಾಜ್ಯದಿಂದ ಸರ್ವಪಕ್ಷಗಳ ನಿಯೋಗವನ್ನು ರಾಷ್ಟ್ರ ರಾಜಧಾನಿ ದೆಹಲಿಗೆ ಕರೆದೊಯ್ಯಲಾಗಿತ್ತು. ಆದರೆ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಕುಲಕರ್ಣಿ ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ.  

ವೆಬ್ದುನಿಯಾವನ್ನು ಓದಿ