ನೊಬೆಲ್ ವಿಜೇತೆ ಮಲಾಲಾಗೆ ಕಾಡುತ್ತಿದೆಯಂತೆ ಪರೀಕ್ಷೆ ಚಿಂತೆ

ಸೋಮವಾರ, 13 ಅಕ್ಟೋಬರ್ 2014 (11:25 IST)
ನೊಬೆಲ್  ಪ್ರಶಸ್ತಿ ವಿಜೇತೆ , ಪಾಕ್ ಮೂಲದ ಹೆಣ್ಣುಮಕ್ಕಳ ಶಿಕ್ಷಣ ಹಕ್ಕುಗಳ ಹೋರಾಟಗಾರ್ತಿ ಮಲಾಲಾ ಯುಸುಫ್‌ಝಾಯಿಗೆ ನೊಬೆಲ್ ಗೆದ್ದ ಸಂತೋಷದ ನಡುವೆಯೂ ಪರೀಕ್ಷೆಯ ಚಿಂತೆ ಕಾಡುತ್ತಿದೆ. 

ಹೆಣ್ಣುಮಕ್ಕಳ ಶಿಕ್ಷಣವನ್ನು ಬೆಂಬಲಿಸಿದ್ದಕ್ಕೆ ಪಾಕಿಸ್ತಾನದ ಈ ಹದಿಹರೆಯದ ಕುವರಿಯ ಮೇಲೆ 2012ರಲ್ಲಿ ಗುಂಡಿನ ದಾಳಿಯಾಗಿತ್ತು.  ಜೀವನ್ಮರಣದ ಹೋರಾಟದಲ್ಲಿ ಜಯಶಾಲಿಯಾಗಿ ಬಂದ ಆಕೆ ತನ್ನ ಹೋರಾಟದ ಕಾರಣಕ್ಕೆ ಅಂತಾರಾಷ್ಟ್ರೀಯ ಖ್ಯಾತಿ ಗಳಿಸಿದ್ದಾಳೆ. 
 
ಅಂತಹ ದಿಟ್ಟ ಹುಡುಗಿಗೆ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಹೋದಾಗ ಪರೀಕ್ಷೆ ಬರೆಯುವುದು ಹೇಗೆ ಎಂಬ ಚಿಂತೆ ಕಾಡುತ್ತಿದೆಯಂತೆ!
 
ಅತಿ ಚಿಕ್ಕ ವಯಸ್ಸಿನಲ್ಲಿ ನೊಬೆಲ್ ಗೆದ್ದ ಬಾಲೆ, ಪ್ರಶಸ್ತಿ ಪಡೆದ ದಿನ ಯಾವ ಸಂಭ್ರಮಾಚರಣೆಯಲ್ಲೂ ತೊಡಗದೆ ತನ್ನ ಮನೆಯಲ್ಲಿ ಪಾಕಿಸ್ತಾನಿ ಟಿವಿ ನೋಡುತ್ತಾ ಕಾಲಕಳೆದಳು.
 
ಹೆಣ್ಣುಮಕ್ಕಳ ಶಿಕ್ಷಣದ ಹಕ್ಕನ್ನು ಪ್ರತಿಪಾದಿಸುತ್ತಿದ್ದ ಮಲಾಲಾ ಮೇಲೆ ಗುಂಡಿನ ದಾಳಿ ನಡೆದಾಗ ಹೆಚ್ಚಿನ ಚಿಕಿತ್ಸೆಗಾಗಿ ಆಕೆಯನ್ನು ವಿಶೇಷ ವಿಮಾನದಲ್ಲಿ ಬರ್ಮಿಂಗ್‌ಹ್ಯಾಂಗೆ ಕರೆತರಲಾಗಿತ್ತು. ಆಗ ಇಡೀ ವಿಶ್ವವೇ ಆಕೆಯ ಬೆಂಬಲಕ್ಕೆ ನಿಂತಿತ್ತು.
 
''ನನಗೆ ಬಹಳ ಸಂತೋಷವಾಗುತ್ತಿದೆ. ಜನರ ಪ್ರೀತಿ ಗುಂಡಿನ ದಾಳಿಯಿಂದ ಚೇತರಿಸಿಕೊಳ್ಳಲು ಸಹಾಯ ಮಾಡಿತು ಮತ್ತು ನನ್ನನ್ನು ಇನ್ನಷ್ಟು ಗಟ್ಟಿಗೊಳಿಸಿತು. ಆದ್ದರಿಂದ ನನ್ನಿಂದ ಸಾಧ್ಯವಾಗುವ ಎಲ್ಲ ಬಗೆಯಲ್ಲೂ ಸಮಾಜಕ್ಕೆ ಕೊಡುಗೆ ನೀಡುತ್ತೇನೆ,'' ಎಂಬ ದೃಢಸಂಕಲ್ಪದ ಮಾತನಾಡುತ್ತಾಳೆ ಮಲಾಲ. 
 
ನೊಬೆಲ್ ಪ್ರಶಸ್ತಿ ಘೋಷಣೆಯಾದಾಗ ಮಲಾಲಾ ಶಾಲೆಯಲ್ಲಿ ರಸಾಯನ ಶಾಸ್ತ್ರ ತರಗತಿಯಲ್ಲಿದ್ದಳು. ತನಗೆ ಪ್ರಶಸ್ತಿ ದೊರಕಿದರೆ ಮಾಹಿತಿ ನೀಡುವಂತೆ ಆಕೆ ಶಿಕ್ಷಕಿಗೆ ಮನವಿ ಮಾಡಿದ್ದಳು.
 
''ರಸಾಯನ ಶಾಸ್ತ್ರದ ತರಗತಿಯಲ್ಲಿ ಎಲೆಕ್ಟ್ರೊಲಿಸಿಸ್ ತರಗತಿ ನಡೆಯುತ್ತಿತ್ತು. ನಾನು ಮೊಬೈಲ್ ಬಳಸುವುದಿಲ್ಲ. ಆದ್ದರಿಂದ ನಿನಗೆ ಪ್ರಶಸ್ತಿ ವಿಚಾರ ಬಂದರೆ ಹೇಳುತ್ತೇನೆ ಎಂದು ನನ್ನ ಶಿಕ್ಷಕಿ ಹೇಳಿದ್ದಳು. 10 ಗಂಟೆಗೆ ಸಂದೇಶ ತರಬೇಕಾದ ಅವರು 10.15 ಆದರೂ ಬರದಿದ್ದಾಗ ನಾನಿನ್ನೂ ಚಿಕ್ಕವಳು, ಈಗಷ್ಟೇ ಕೆಲಸ ಆರಂಭಿಸಿದ್ದೇನೆ, ನಾನು  ಈ ಪ್ರಶಸ್ತಿಯನ್ನು ಗೆಲ್ಲಲಾಗುವುದಿಲ್ಲ ಎಂದುಕೊಂಡೆ,'' .
 
''ಅದಾದ ಕೆಲ ನಿಮಿಷಗಳ ಬಳಿಕ ಬಂದ ಶಿಕ್ಷಕಿ ನನಗೆ ನೊಬೆಲ್ ಘೋಷಣೆಯಾದ ವಿಷಯ ಹೇಳಿದರು. ನನಗಿಂತಲೂ ನನ್ನ ಶಿಕ್ಷಕ ವರ್ಗವೇ  ಹೆಚ್ಚು ಸಂಭ್ರಮವನ್ನು ಆಚರಿಸಿತು. ಅವರ ನಗುವೇ ನನಗೆ ಎಲ್ಲಕ್ಕಿಂತ ದೊಡ್ಡದು. ಆ ಬಳಿಕ  ನಾನು ಭೌತಶಾಸ್ತ್ರದ ತರಗತಿಗೆ ಹೋದೆ,''  ಎಂದು ತನ್ನ ಅಂತರಂಗದ ಮಾತುಗಳನ್ನು ವಿವರಿಸುತ್ತಾಳೆ  ಮಲಾಲಾ.

ವೆಬ್ದುನಿಯಾವನ್ನು ಓದಿ