ಹುದ್ದೆ ಖಾಯಂಗೆ ಆಗ್ರಹಿಸಿ ನರ್ಸ್‌ಗಳ ಪ್ರತಿಭಟನೆ: ಮಹಿಳಾ ಆಯೋಗಕ್ಕೆ ದೂರು ಸಲ್ಲಿಕೆ

ಶುಕ್ರವಾರ, 9 ಅಕ್ಟೋಬರ್ 2015 (18:32 IST)
ನಗರದ ಕಿಮ್ಸ್ ಆಸ್ಪತ್ರೆಯ ಶುಶ್ರೂಷಕಿಯರು ಕಳೆದ ಹಲವು ದಿನಗಳಿಂದ ತಮ್ಮ ಹುದ್ದೆಯನ್ನು ಖಾಯಂಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದು, ಇಂದು 19ನೇ ದಿನಕ್ಕೆ ಕಾಲಿಟ್ಟಿದೆ. 
 
ಆಸ್ಪತ್ರೆಯ ಆಡಳಿತ ಮಂಡಳಿಯ ಕಚೇರಿ ಎದುರು ನಡೆಸುತ್ತಿರುವ ಈ ಪ್ರತಿಭಟನೆಯು ನಿನ್ನೆಯಿಂದ ತೀವ್ರ ಸ್ವರೂಪ ಪಡೆದಿದ್ದು, 150ಕ್ಕೂ ಹೆಚ್ಚು ಮಂದಿ ಶುಶ್ರೂಷಕಿಯರು ಒಗ್ಗೂಡಿ ಪ್ರತಿಭಟನೆ ನಡೆಸುತ್ತಿದ್ದಾರೆ. 
 
ನಾವು ಕಳೆದ ಮೂರ್ನಾಲ್ಕು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರೂ ಕೂಡ ನಮ್ಮನ್ನು ಕಡೆಗಣಿಸಿ ಇತರೆ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಆದ್ದರಿಂದ ನೇಮಕಾತಿ ನಿಲ್ಲಿಸಿ ತಮ್ಮನ್ನು ಖಾಯಂಗೊಳಿಸುವಂತೆ ಒತ್ತಾಯಿಸಿ ಶುಶ್ರೂಷಕಿಯರು ಪ್ರತಿಭಟನೆ ನಡೆಸುತ್ತಿದ್ದಾರೆ.
 
ನಿನ್ನೆ ಒಕ್ಕಲಿಗರ ಸಂಘದ ಅಧ್ಯಕ್ಷ ಡಾ.ಅಪ್ಪಾಜಿಗೌಡ ಅವರಿಗೆ ಮುತ್ತಿಗೆ ಹಾಕಿದ್ದ ಪ್ರತಿಭಟನಾನಿರತ ನರ್ಸ್‌ಗಳ ತಂಡ ಹುದ್ದೆಯನ್ನು ಖಾಯಂಗೊಳಿಸುವಂತೆ ತಾಕೀತು ಮಾಡಿತ್ತು. ಆದರೂ ಕೂಡ ಆಡಳಿತ ಮಂಡಳಿ ಇನ್ನೂ ಕೂಡ ಸೂಕ್ತ ಕ್ರಮಕ್ಕೆ ಮುಂದಾಗಿಲ್ಲ. ಈ ಹಿನ್ನೆಲೆಯಲ್ಲಿ ಶುಶ್ರೂಷಕಿಯರು ತಮ್ಮ ಹೋರಾಟವನ್ನು ಮುಂದುವರಿಸಿದ್ದಾರೆ. ಇನ್ನು ಈ ಪ್ರತಿಭಟನೆಗೆ ರೈತ ಸಂಘದ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಅವರೂ ಕೂಡ ಸಾಥ್ ನೀಡಿದ್ದಾರೆ. 
 
ಮೂಲಗಳ ಪ್ರಕಾರ, ರಾಜ್ಯ ಮಹಿಳಾ ಆಯೋಗಕ್ಕೂ ಕೂಡ ದೂರು ಸಲ್ಲಿಸಿದ್ದು, ತಮ್ಮ ಬೇಡಿಕೆ ಈಡೇರಿಕೆಗೆ ಮಧ್ಯ ಪ್ರವೇಶಿಸುವಂತೆ ಮನವಿ ಮಾಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಹುಬ್ಬಳ್ಳಿ ನಗರದ ಕಿಮ್ಸ್ ಆಸ್ಪತ್ರೆಯ ಶುಶ್ರೂಷಕಿಯರೂ ಕೂಡ ಇದೇ ಕಾರಣಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದು, ಕಳೆದ 45 ದಿನಗಳಿಂದಲೂ ಪ್ರತಿಭಟನೆ ನಡೆಸುತ್ತಿದ್ದಾರೆ.  

ವೆಬ್ದುನಿಯಾವನ್ನು ಓದಿ