ನೌಕರಿ ಖಾಯಂಗೊಳಿಸುವಂತೆ ಒತ್ತಾಯಿಸಿ ಕಿಮ್ಸ್ ಶುಶ್ರೂಷಕಿಯರಿಂದ ಬಾಗಿನದೊಂದಿಗೆ ಪ್ರತಿಭಟನೆ ?!

ಸೋಮವಾರ, 5 ಅಕ್ಟೋಬರ್ 2015 (16:28 IST)
ಕಳೆದ 15 ದಿನಗಳಿಂದ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದರೂ ಕೂಡ ಸರಿಯಾದ ಸ್ಪಂಧನೆ ಸಿಗದ ಹಿನ್ನೆಲೆಯಲ್ಲಿ ನಗರದ ಕಿಮ್ಸ್ ಆಸ್ಪತ್ರೆಯ ಶುಶ್ರೂಷಕಿಯರು ಇಂದು ರಾಜ್ಯ ಒಕ್ಕಲಿಗ ಸಂಘದ ಅಧ್ಯಕ್ಷ ಅಪ್ಪಾಜಿಗೌಡ ಅವರ ಕಚೇರಿಯ ಎದುರು ಬಾಗಿನ ಇಟ್ಟು ವಿಭಿನ್ನವಾಗಿ ಪ್ರತಿಭಟಿಸಿದರು. 
 
ನಗರದ ಚಾಮರಾಜಪೇಟೆಯಲ್ಲಿರುವ ಅಪ್ಪಾಜಿಗೌಡರ ಕಚೇರಿ ಎದುರು ಬಾಗಿನ ಇಟ್ಟು ಪ್ರತಿಭಟನೆ ನಡೆಸುತ್ತಿರುವ ಶುಶ್ರೂಷಕಿಯರು ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದರು. ಈ ವೇಳೆ ನಾವು ಕಳೆದ 15 ದಿನಗಳಿಂದಲೂ ಕೂಡ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ. ಆದರೆ ನಮ್ಮ ಸಮಸ್ಯೆಗೆ ಯಾರೊಬ್ಬರೂ ಸ್ಪಂಧಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದೇವೆ ಎಂದ ಅವರು, ಸಂಘದ ಅಧ್ಯಕ್ಷರು ನಮ್ಮ ಸಮಸ್ಯೆಯನ್ನು ಈಡೇರಿಸಲಿ, ಇಲ್ಲವಾದಲ್ಲಿ ನಾವು ನೀಡುವ ಈ ಬಾಗಿನ ತೆಗೆದುಕೊಂಡು ಬಳೆ ತೊಟ್ಟುಕೊಳ್ಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು. 
 
ಇನ್ನು ಕಿಮ್ಸ್ ಆಸ್ಪತ್ರೆಯು ರಾಜ್ಯ ಒಕ್ಕಲಿಗ ಸಂಘದ ಆಡಳಿತಕ್ಕೊಳಪಟ್ಟಿದ್ದು, ಇಲ್ಲಿ ಪ್ರತಿಭಟನಾನಿರತ ಶುಶ್ರೂಷಕಿಯರೆಲ್ಲರೂ ಕೂಡ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನೌಕರಿಯನ್ನು ಖಾಯಂಗೊಳಿಸಬೇಕಾಗಿ ಹಾಗೂ ಇತರೆ ನೂತನ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳದಂತೆ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಇದಕ್ಕೆ ಒಪ್ಪದ ಆಡಳಿತ ಮಂಡಳಿ ಕೆಲಸಕ್ಕೆ ತಕ್ಕಂತೆ ವೇತನ ನೀಡಲಾಗುತ್ತಿದ್ದು, ಖಾಯಂಗೊಳಿಸಲು ಸಾಧ್ಯವಿಲ್ಲ ಎಂದು ಹೇಳುತ್ತಿದೆ ಎನ್ನಲಾಗಿದೆ. 

ವೆಬ್ದುನಿಯಾವನ್ನು ಓದಿ