ಅಪ್ಪಾಜಿಗೌಡರಿಗೆ ಮುತ್ತಿಗೆ ಹಾಕಿದ ಪ್ರತಿಭಟನಾನಿರತ ಕಿಮ್ಸ್ ಶುಶ್ರೂಷಕಿಯರು

ಗುರುವಾರ, 8 ಅಕ್ಟೋಬರ್ 2015 (16:45 IST)
ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಗರದ ಕಿಮ್ಸ್ ಆಸ್ಪತ್ರೆಯ ಶುಶ್ರೂಷಕಿಯರು ಕಳೆದ 15 ದಿನಗಳಿಂದ ಹಮ್ಮಿಕೊಂಡಿರುವ ಪ್ರತಿಭಟನೆಯು ಇಂದು ತೀವ್ರ ಸ್ವರೂಪ ಪಡೆದಿದ್ದು, ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಡಾ.ಅಪ್ಪಾಜಿಗೌಡ ಅವರಿಗೆ ಮುತ್ತಿಗೆ ಹಾಕಿದ್ದಾರೆ. 
 
ಕಳೆದ 15 ದಿನಗಳಿಂದ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿರುವ ಶುಶ್ರೂಷಕಿಯರ ತಂಡ ಇಂದು ನೇರವಾಗಿ ಆಸ್ಪತ್ರೆಯ ಆಡಳಿತ ಜವಾಬ್ದಾರಿ ಹೊತ್ತಿರುವ, ಸಂಘದ ಅಧ್ಯಕ್ಷ ಅಪ್ಪಾಜಿಗೌಡ ಅವರಿಗೆ ಮುತ್ತಿಗೆ ಹಾಕಿತು. ಈ ವೇಳೆ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ತಾಕೀತು ಮಾಡಿದರು. ಅಲ್ಲದೆ ಮುತ್ತಿಗೆ ತಡೆಯಲೆಂದು ಮಧ್ಯ ಪ್ರವೇಶಿಸಿದ ಪೊಲೀಸರ ನಡುವೆ ಶುಶ್ರೂಷಕಿಯರು ತೀವ್ರ ವಾಗ್ವಾದವನ್ನೂ ನಡೆಸಿದರು. 
 
ಇನ್ನು ಇತ್ತೀಚೆಗೆ ನಾವು ಆಸ್ಪತ್ರೆಯಲ್ಲಿ ಹಲವು ವರ್ಷಗಳ ಕಾಲ ಕಾರ್ಯ ನಿರ್ವಹಿಸುತ್ತಿದ್ದು, ಪ್ರಸ್ತತವೂ ಕೂಡ ಕಾರ್ಯ ನಿರ್ವಹಿಸುತ್ತಿದ್ದೇವೆ. ಆದರೆ ನಮ್ಮನ್ನು ಕಡೆಗಣಿಸಿ ಇತರೆ ನೂತನ ನರ್ಸ್‌ಗಳ ನೇಮಕಕ್ಕೆ ಆಸ್ಪತ್ರೆಯ ಆಡಳಿತ ಮಂಡಳಿ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ನೂತನ ನೇಮಕಾತಿ ನಿಲ್ಲಿಸಿ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ನಮ್ಮನ್ನು ಖಾಯಂಗೊಳಿಸಿಕೊಳ್ಳಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. 
 
ಇನ್ನು ಪ್ರತಿಭಟನೆ ವೇಳೆ ಅಸ್ವಸ್ಥಗೊಂಡು ಶೃತಿ ಎಂಬ ಶುಶ್ರೂಷಕಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲದೆ ಪ್ರತಿಭಟನೆ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕಳೆದ ಹಲವು ವರ್ಷಗಳಿಂದ ಸೇವೆ ಸಲ್ಲಿಸಿರುವ 124 ಮಂದಿ ಶುಶ್ರೂಷಕಿಯರಿಗೆ 16 ಸಾವಿರ ಹಾಗೂ 30 ಮಂದಿಗೆ 12 ಸಾವಿರ ರೂ. ಮಾಸಿಕ ವೇತನ ನೀಡಲು ಆಡಳಿತ ಮಂಡಳಿ ನಿರ್ಧರಿಸಿದೆ ಎನ್ನಲಾಗಿದೆ.  

ವೆಬ್ದುನಿಯಾವನ್ನು ಓದಿ