ಪ್ರೀತಿಗೆ ನಿರಾಕರಣೆ: ಗುಂಡು ಹಾರಿಸಿ ಕೊಂದ ಭಗ್ನ ಪ್ರೇಮಿ ?!

ಬುಧವಾರ, 1 ಏಪ್ರಿಲ್ 2015 (13:48 IST)
ಪ್ರೀತಿಸಲು ನಿರಾಕರಿಸಿದಳು ಎಂಬ ಕಾರಣಕ್ಕೆ ಕಾಲೇಜಿನ ಅಟೆಂಡರ್ ಓರ್ವ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೋರ್ವಳ ತಲೆಗೆ ಗುಂಡು ಹಾರಿಸಿ ಹತ್ಯೆಗೈದು ಬಳಿಕ ಆಕೆಯ ಸ್ನೇಹಿತೆ ಮೇಲೂ ಗುಂಡು ಹಾರಿಸಿ ಗಾಯಗೊಳಿಸಿರುವ ಘಟನೆ ನಗರದ ಕಾಡುಗೋಡಿಯಲ್ಲಿರುವ ಪ್ರಗತಿ ರೆಸಿಡೆನ್ಷಿಯಲ್​ ಶಾಲೆಯ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ನಡೆದಿದೆ.
 
ಘಟನೆಯಲ್ಲಿ ಸಾವನ್ನಪ್ಪಿದ ಯುವತಿಯನ್ನು ಗೌತಮಿ(18) ಎಂದು ಹೇಳಲಾಗಿದ್ದು, ದ್ವಿತೀಯ ಪಿಯುಸಿಯ ವಿಜ್ಞಾನ ವಿಭಾಗದಲ್ಲಿ ಓದುತ್ತಿದ್ದಳು. ಅಲ್ಲದೆ ಸಿಇಟಿ ಹಿನ್ನೆಲೆಯಲ್ಲಿ ತರಬೇತಿಗಾಗಿ ನಗರಕ್ಕೆ ಆಗಮಿಸಿದ್ದಳು ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿ ನಿಲಯದಲ್ಲಿ ತಂಗಿದ್ದಳು ಎನ್ನಲಾಗಿದೆ. ಈಕೆ ತುಮಕೂರು ಜಿಲ್ಲೆಯ ಪಾವಗಡ ಮೂಲದವಳು ಎಂದು ಹೇಳಲಾಗಿದೆ. 
 
ಪ್ರಕರಣದ ಹಿನ್ನೆಲೆ: ಘಟನೆಯು ಕಳೆದ ರಾತ್ರಿ ನಡೆದಿದ್ದು, ಶಾಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಅಟೆಂಡರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಶಿವಮೊಗ್ಗ ಜಿಲ್ಲೆಯ ಆಗುಂಬೆ ಮೂಲದ ಮಹೇಶ್(40) ಈ ಕೃತ್ಯ ಎಸಗಿದ ಆರೋಪಿ ಎಂದು ಹೇಳಲಾಗಿದ್ದು, ಮೃತ ಗೌತಮಿ ತನ್ನನ್ನು ಪ್ರೀತಿಸಲು ನಿರಾಕರಿಸುತ್ತಿದ್ದ ಕಾರಣಕ್ಕೆ ಈ ಕೃತ್ಯ ಎಸಗಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.  
 
ಇನ್ನು ಘಟನೆಯಲ್ಲಿ ಓರ್ವ ಯುವತಿ ಸಾವನ್ನಪ್ಪಿದ್ದಲ್ಲದೆ, ಮೃತ ವಿದ್ಯಾರ್ಥಿನಿಯ ಗೆಳತಿ ಶಿರಿಶಾ(18) ಕೂಡ ಗಂಭೀರವಾಗಿ ಗಾಯಗೊಂಡಿದ್ದು, ಆಕೆಯನ್ನು ನಗರದ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.  
 
ಈ ಬಗ್ಗೆ ಗಾಯಾಳು ವಿದ್ಯಾರ್ಥಿನಿಯ ತಂದೆ ಪ್ರತಿಕ್ರಿಯಿಸಿದ್ದು, ನನ್ನ ಮಗಳಿಗೂ ಒಂದು ಗುಂಡು ತಗುಲಿದ್ದು, ಬಾಯಿ ಹಾಗೂ ಮೂಗಿನ ಭಾಗದಲ್ಲಿ ಗಾಯಗಳಾಗಿವೆ. ಆದರೆ ಗಂಭೀರವಾದ ಸ್ವರೂಪದ ಗಾಯವಲ್ಲ. ಆದ್ದರಿಂದ ಭಯ ಪಡುವ ಅಗತ್ಯವಿಲ್ಲ ಎಂದು ವೈದ್ಯರು ತಿಳಿಸಿರುವುದಾಗಿ ಹೇಳಿದ್ದಾರೆ. 
 
ಆರೋಪಿಯು ಘಟನೆಯಲ್ಲಿ ಮೂರು ಗುಂಡುಗಳನ್ನು ಹಾರಿಸಿದ್ದು, ಗೌತಮಿಯ ಬಾಯಿಗೆ ಒಂದು ಗುಂಡನ್ನು ಹಾರಿಸಿ ಹತ್ಯೆ ಗೈದರೆ, ಇನ್ನೊಂದು ಗುಂಡನ್ನು ಗೌತಮಿಯ ಗೆಳತಿಗೆ ಹಾರಿಸಿ ಗಾಯಗೊಳಿಸಿದ್ದಾನೆ. ಮತ್ತೊಂದು ಗುಂಡಿನ ದಾಳಿಯ ಪ್ರಯತ್ನ ವ್ಯರ್ಥವಾಗಿದೆ.   
 
ಸುದ್ದಿ ತಿಳಿಯುತ್ತಿದ್ದಂತೆ ಗೃಹ ಸಚಿವ ಕೆ.ಜೆ.ಜಾರ್ಜ್, ಕೇಂದ್ರ ವಲಯದ ಆಗ್ನೆಯ ವಿಭಾಗದ ಡಿಸಿಪಿ ರೋಹಿಣಿ ಕಟೋಚ್, ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಸೇರಿದಂತೆ ಇತರೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಆಗಮಿಸಿದ್ದು, ಘಟನಾ ಸ್ಥಳವನ್ನು ಪರಿಶೀಲಿಸಿದ್ದಾರೆ. ಇನ್ನು ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ. 
 
ಇನ್ನು ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿರುವ ಡಿಸಿಪಿ ರೋಹಿಣಿ ಕಟೋಚ್, ಪ್ರಕರಣ ನಿನ್ನೆ ನಡೆದಿದ್ದು, ಪ್ರಕರಣಕ್ಕೆ ಕಾರಣ ತಿಳಿದು ಬಂದಿಲ್ಲ. ಆದರೆ ಆರೋಪಿಯು ಇಲ್ಲಿ ಅಟೆಂಡರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಮಹೇಶ್ ಎಂದು ಹೇಳಲಾಗಿದ್ದು, ಈ ಸಂಬಂಧ ತನಿಖೆ ಮುಂದುವರಿಸಿದ್ದೇವೆ. ಅಲ್ಲದೆ ಆರೋಪಿ ಬಳಸಿದ್ದ ಪಿಸ್ತೂಲನ್ನು ವಶಕ್ಕೆ ಪಡೆದಿದ್ದು, ತನಿಖೆಗಾಗಿ ಮೂರು ವಿಶೇಷ ತಂಡಗಳನ್ನು ರಚಿಸಿದ್ದೇವೆ ಎಂದಿದ್ದಾರೆ. 
 
ಘಟನೆ ಹಿನ್ನೆಲೆಯಲ್ಲಿ ಮೃತ ಯುವತಿಯ ಕುಂಬಕ್ಕೆ ಸೂಕ್ತ ನ್ಯಾಯ ಒದಗಿಸಬೇಕು ಎಂದು ಪಟ್ಟು ಹಿಡಿದಿರುವ ಮಹಿಳಾ ಸಂಘಟನೆಗಳು ಘಟನೆಯನ್ನು ಖಂಡಿಸಿ ಪ್ರತಿಭಟನೆ ಹಮ್ಮಿಕೊಂಡಿದ್ದು, ಸರ್ಕಾರ ಕೂಡಲೇ ಆರೋಪಿಯನ್ನು ಬಂಧಿಸಿ ಸೂಕ್ತ ನ್ಯಾಯ ಒದಗಿಸಬೇಕೆಂದು ಒತ್ತಾಯಿಸುತ್ತಿವೆ. 

ವೆಬ್ದುನಿಯಾವನ್ನು ಓದಿ