ಭ್ರಷ್ಟಾಚಾರದಿಂದ ಬೇಸತ್ತ ಉನ್ನತಾಧಿಕಾರಿಯಿಂದ ರಾಜೀನಾಮೆ...?!

ಮಂಗಳವಾರ, 3 ಮಾರ್ಚ್ 2015 (11:30 IST)
ಸಹೋದ್ಯೋಗಿಗಳ ಭ್ರಷ್ಟಾಚಾರದಿಂದ ಬೇಸತ್ತ ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಕಂದಾಯ ಇಲಾಖೆಯ ಉಪ ನೋಂದಣಾಧಿಕಾರಿಯೋರ್ವರು ಕಳೆದ ಫೆ.27ರಂದು ತಮ್ಮ ಉನ್ನತ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. 
 
ಸಹೋದ್ಯೋಗಿಗಳ ಭ್ರಷ್ಟಾಚಾರದಿಂದ ಬೇಸತ್ತು ರಾಜೀನಾಮೆ ನೀಡಿದ ಅಧಿಕಾರಿಯನ್ನು ಚೆಲುವರಾಜು ಎಂದು ತಿಳಿದು ಬಂದಿದ್ದು, ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಈ ವೇಳೆ, ಕಚೇರಿಯಲ್ಲಿನ ಸಹೋದ್ಯೋಗಿಗಳು ಸಾಕಷ್ಟು ದಿನಗಳಿಂದ ಭ್ರಷ್ಟಾಚಾರದಲ್ಲಿ ತೊಡಗಿದ್ದರು. ಇದನ್ನು ನಾನು ಆಗಾಗ ವಿರೋಧಿಸುತ್ತಲೇ ಬಂದಿದ್ದೆ. ಅಲ್ಲದೆ ಭ್ರಷ್ಟಾಚಾರವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದೆ. ಆದರೆ ಇದಕ್ಕೆ ಕಚೇರಿಯ ಇಥರೆ ಸಿಬ್ಬಂಧಿಗಳು ವಿರೋಧಿಸುತ್ತಿದ್ದರು ಎಂದಿದ್ದಾರೆ. 
 
ಬಳಿಕ ಮಾತನಾಡಿದ ಅವರು, ಭ್ರಷ್ಟಾಚಾರವನ್ನು ತಡೆಯುವ ದೃಷ್ಟಿಯಿಂದ ಕಚೇರಿಯಲ್ಲಿ ಸಿಸಿಟಿವಿಗಳನ್ನು ಹಾಗೂ ಬಯೋಮೆಟ್ರಿಕ್ ಸಾಧನಗಳನ್ನು ಅಳವಡಿಸಿಬೇಕು ಎಂದು ಬೇಡಿಕೆ ಇಟ್ಟಿದ್ದೆ. ಆದರೆ ಇದಕ್ಕೆ ಕಚೇರಿಯ ಉನ್ನತಾಧಿಕಾರಿಗಳು ಹಾಗೂ ಇತರೆ ಸಹೋದ್ಯೋಗಿಗಳು ಸಹಕರಿಸುತ್ತಿರಲಿಲ್ಲ. ಅಲ್ಲದೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಲ್ಲಿ ತಮ್ಮೊಂದಿಗೆ ಅಸಮಧಾನದಿಂದ ವರ್ತಿಸುತ್ತಿದ್ದರು. ಆಗಾಗ ತಮ್ಮ ಕಾರ್ಯ ವೈಖರಿ ವಿರುದ್ಧ ಕೆಂಗಣ್ಣು ಬೀರಿದ್ದೂ ಕೂಡ ಇದೆ ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ. 
 
ಇನ್ನು ಚೆಲುವರಾಜು ಅವರು ಉಪ ನೋಂದಾವಣಾಧಿಕಾರಿ ಹುದ್ದೆ ಸೇರಿದಂತೆ ಇತರೆ ಉನ್ನತ ಹುದ್ದೆಗಳನ್ನು ನಿರ್ವಹಿಸಿದ್ದು, ಕಳೆದ 16 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು ಎಂದು ತಿಳಿದು ಬಂದಿದ್ದಾರೆ. 

ವೆಬ್ದುನಿಯಾವನ್ನು ಓದಿ