ಶಾಸಕ ವರ್ತೂರು ವಿರುದ್ಧ ಮತ್ತೆ ಎರಡು ಪ್ರತ್ಯೇಕ ದೂರು

ಶುಕ್ರವಾರ, 24 ಏಪ್ರಿಲ್ 2015 (13:38 IST)
ಕೋಲಾರ ವಿಧಾನಸಭಾ ಕ್ಷೇತ್ರದ ಪಕ್ಷೇತರ ಶಾಸಕ ವರ್ತೂರು ಪ್ರಕಾಶ್ ವಿರುದ್ಧ ಈಗಾಗಲೇ ದೂರು ದಾಖಲಿಸಿರುವ ಮಾನವಹಕ್ಕುಗಳ ಹೋರಾಟಗಾರ ಗಿರೀಶ್ ಗೌಡ ಅವರು, ಇಂದು ಮತ್ತೆ ಎರಡು ಪ್ರತ್ಯೇಕ ದೂರುಗಳನ್ನು ದಾಖಲಿಸಿದ್ದಾರೆ. 
 
ಗಿರೀಶ್ ಗೌಡ ಅವರು ಶಾಸಕರ ವಿರುದ್ಧ ಕೋಲಾರ ಜಿಲ್ಲಾ ಲೋಕಾಯುಕ್ತ ಎಸ್ಪಿ ಕಚೇರಿಯಲ್ಲಿ ದೂರು ನೀಡಿದರು. ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಾಸಕರು ಕಳೆದ ತಮ್ಮ ರಾಜಕೀಯ ಅಧಿಕಾರಾವಧಿ ಸಂದರ್ಭದಲ್ಲಿ ವ್ಯತಿರಿಕ್ತವಾಗಿ ನಡೆದುಕೊಂಡಿದ್ದು, ಹಲವು ದಾಖಲೆಗಳನ್ನು ಕಲೆ ಹಾಕಿದ್ದೇನೆ. ಅದರನ್ವಯ ಪ್ರತ್ಯೇಕವಾಗಿ ಎರಡು ದೂರುಗಳನ್ನು ದಾಖಲಿಸಿದ್ದು, ಒಂದು ಉಪ ನಿರೀಕ್ಷಕರಿಗೆ ಬೆದರಿಕೆ ಹಾಕಿದ್ದು, ಹಾಗೂ ನಿವೃತ್ತ ಡಿವೈಎಸ್ಪಿ ಗೋವಿಂದಯ್ಯ ಅವರಿಗೆ ಚುನಾವಣೆಗೆ ಹಣ ನೀಡಲು ಬೇಡಿಕೆ ಇಟ್ಟಿದ್ದ ಹಿನ್ನೆಲೆಯಲ್ಲಿ ದೂರು ದಾಖಲಿಸಿರುವುದಾಗಿ ತಿಳಿಸಿದರು. 
 
ಬಳಿಕ, ಶಾಸಕರು ಅಕ್ರಮವಾಗಿ ಸಾಕಷ್ಟು ಸಾರ್ವಜನಿಕ ಆಸ್ತಿಯನ್ನು ಕಬಳಿಸಿದ್ದು, ಬೆಂಗಳೂರಿನ ಜೆ.ಸಿ.ರಸ್ತೆಯಲ್ಲಿರುವ ತಮ್ಮ ಆಸ್ತಿಯ ವಿವರವನ್ನು ಕಳೆದ 2008ನೇ ಸಾಲಿನಲ್ಲಿ ನಡೆದ ವಿಧಾನಸಭಾ ಚುನಾವಣೆ ವೇಳೆ ಸಲ್ಲಿಸಿರುವ ನಾಮಪತ್ರದಲ್ಲಿ ನಮೂದಿಸಲಾಗಿಲ್ಲ. ಆದ್ದರಿಂದ ಸರ್ಕಾರ ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಒತ್ತಾಯಿಸಿದ್ದರು. 
 
ಪ್ರೊಬೇಷನರ್ ಅಧಿಕಾರಿಯೋರ್ವರಿಗೆ ಮರಳಿನ ಲಾರಿಗಳನ್ನು ಬಿಡುಗಡೆಗೊಳಿಸುವಂತೆ ಧಮ್ಕಿ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಧ್ವನಿ ಸುರುಳಿಯೊಂದನ್ನು ಬಿಡುಗಡೆಗೊಳಿಸಿದ್ದರು. ಈ ಹಿನ್ನೆಲೆಯಲ್ಲಿ ಗಿರೀಶ್, ಶಾಸಕ ವರ್ತೂರು ಪ್ರಕಾಶ್ ವಿರುದ್ಧ ಈ ಹಿಂದೆಯೇ ದೂರು ದಾಖಲಿಸಿದ್ದರು.  

ವೆಬ್ದುನಿಯಾವನ್ನು ಓದಿ