1 ಕೋಟಿ ಲಂಚ ಪ್ರಕರಣ: ಲೋಕಾ ತನಿಖೆಗೆ ತಡೆ ನೀಡಿದ ಹೈಕೋರ್ಟ್

ಬುಧವಾರ, 1 ಜುಲೈ 2015 (14:34 IST)
ಲೋಕಾಯುಕ್ತ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಒಂದು ಕೋಟಿ ರೂ. ಲಂಚ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ರಿಟ್ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್‌ನ ವಿಭಾಗೀಯ ಪೀಠ ಇಂದು ನಡೆಸಿದ್ದು, ಸೋನಿಯಾ ನಾರಂಗ್ ನೇತೃತ್ವದಲ್ಲಿ ನಡೆಯುತ್ತಿರುವ ತನಿಖೆ ನಿಲ್ಲಿಸುವಂತೆ ತಡೆಯಾಜ್ಞೆ ನೀಡಿದೆ. 
 
ಹೈಕೋರ್ಟ್ ಏಕ ಸದಸ್ಯ ಪೀಠ ಈ ಆದೇಶ ನೀಡಿದ್ದು, ಒಂದೇ ಪ್ರಕರಣವನ್ನು ಎರಡು ತಂಡಗಳು ತನಿಖೆ ನಡೆಸುವುದು ಬೇಡ. ಅಲ್ಲದೆ ಲೋಕಾಯುಕ್ತ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿದ್ದು, ಲೋಕಾಯುಕ್ತ ಅಧಿಕಾರಿಗಳೇ ಪ್ರಕರಣದ ತನಿಖೆ ನಡೆಸುವುದು ಸರಿಯಲ್ಲ. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳ ನೇತೃತ್ವದಲ್ಲಿ ನಡೆಯುತ್ತಿರುವ ತನಿಖೆ ನಿಲ್ಲಲಿ ಎಂದು ಆದೇಶಿಸಿದೆ. 
 
ಇನ್ನು ಪ್ರಕರಣದ ಪ್ರಮುಖ ಆರೋಪಿ ಎಂದೇ ಬಿಂಬಿತವಾಗಿರುವ ರಾಜ್ಯದ ಮುಖ್ಯ ಲೋಕಾಯುಕ್ತ ನ್ಯಾ. ವೈ.ಭಾಸ್ಕರ್ ರಾವ್ ಅವರ ಪುತ್ರ ಅಶ್ವಿನ್ ರಾವ್ ಅವರು ಇಂದು ಉಪ ಲೋಕಾಯುಕ್ತರ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಹಿನ್ನೆಲೆಯಲ್ಲಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶ ನೀಡಿದ್ದು, ಬೆಂಗಳೂರು ನಗರದ ಲೋಕಾಯುಕ್ತ ಎಸ್‌ಪಿ ಸೋನಿಯಾ ನಾರಂಗ್ ನೇತೃತ್ವದ ತನಿಖೆಗೆ ತಡೆ ನೀಡಿದೆ. 
 
ಏನಿದು ಪ್ರಕರಣ?:
ಲೋಕಾಯುಕ್ತ ಇಲಾಖೆಯಲ್ಲಿನ ಅಧಿಕಾರಿಗಳೇ ಭ್ರಷ್ಟರನ್ನು ರಕ್ಷಿಸಲು 1 ಕೋಟಿ ರೂ. ಲಂಚ ಪಡೆದಿದ್ದಾರೆ ಎಂಬ ಆರೋಪ ಇದಾಗಿದ್ದು, ಸೋನಿಯಾ ನಾರಂಗ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿತ್ತು. ಆದರೆ ಲೋಕಾಯುಕ್ತ ಇಲಾಖೆಯಲ್ಲಿ ಪ್ರಕರಣ ನಡೆದಿದ್ದು, ಲೋಕಾಯುಕ್ತ ಇಲಾಖೆಯ ಅಧಿಕಾರಿಗಳೇ ತನಿಖೆ ನಡೆಸುವುದು ಸರಿಯಲ್ಲ ಎಂದು ನೆಪ ಹೇಳಿದ್ದ ರಾಜ್ಯದ ಮುಖ್ಯ ಲೋಕಾಯುಕ್ತ ನ್ಯಾ. ವೈ.ಭಾಸ್ಕರ್ ರಾವ್ ಅವರು ಲೋಕಾಯುಕ್ತ ತನಿಖೆಗೆ ತಡೆ ನೀಡಿ ಪ್ರಕರಣವನ್ನು ಸಿಸಿಬಿಗೆ ವಹಿಸಿದ್ದರು.
 
ಆದರೆ ಈ ಸಂಬಂಧ ಪ್ರತಿಕ್ರಿಯಿಸಿದ್ದ ಉಪ ಲೋಕಾಯುಕ್ತ ಸುಭಾಷ್ ಬಿ. ಅಡಿ ಅವರು, ಪ್ರಕರಣವನ್ನು ವರ್ಗಾಯಿಸುವ ಬಗ್ಗೆ ಲೋಕಾಯುಕ್ತರು ತಮ್ಮ ಬಳಿ ಸಲಹೆ ಪಡೆದಿಲ್ಲ. ಅಲ್ಲದೆ ಸಿಸಿಬಿಗೆ ಭ್ರಷ್ಟಾಚಾರ ಪ್ರಕರಣಗಳನ್ನು ತನಿಖೆ ನಡೆಸುವ ಅಧಿಕಾರ ಇದೆಯೇ ಎಂಬ ಬಗ್ಗೆ ನನಗೆ ತಿಳಿದಿಲ್ಲ ಎಂದಿದ್ದರು. ಜೊತೆಗೆ ಸೋನಿಯಾ ನಾರಂಗ್ ಅವರಿಗೆ ತಮ್ಮ ತನಿಖೆಯನ್ನು ಮುಂದುವರಿಸುವಂತೆ ಆದೇಶಿಸಿದ್ದರು. ಈ ಹಿನ್ನೆಲೆಯಲ್ಲಿ ಅಶ್ವಿನ್ ರಾವ್ ಇಂದು ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯ ವಿಚಾರಣೆ ನಡೆಸಿರುವ ನ್ಯಾಯಾಲಯ, ಲೋಕಾ ತನಿಖೆಗೆ ತಡೆ ನೀಡಿದೆ. 
 
ಪ್ರಕರಣದ ಸಿಸಿಬಿ ತನಿಖೆ ಸಂಬಂಧ ಕೆಲ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಮುಖ್ಯ ಲೋಕಾಯುಕ್ತರು ಸರ್ಕಾರಕ್ಕೆ ವಿಶೇಷ ತನಿಖಾ ತಂಡವನ್ನು ರಚಿಸುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಎಸ್ಐಟಿಯನ್ನು ರಚಿಸಿದ್ದು, ಕಾರಾಗೃಹ ಎಡಿಜಿಪಿ ಕಮಲ್ ಪಂತ್ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಯುತ್ತಿದೆ. 

ವೆಬ್ದುನಿಯಾವನ್ನು ಓದಿ