1 ಕೋಟಿ ಲಂಚ ಪ್ರಕರಣ: ಅಶ್ವಿನ್ ರಾವ್ ವಿರುದ್ಧ ಎಫ್ಐಆರ್ ದಾಖಲು

ಬುಧವಾರ, 1 ಜುಲೈ 2015 (16:20 IST)
ಲೋಕಾಯುಕ್ತ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದ ಮುಖ್ಯ ಲೋಕಾಯುಕ್ತ ನ್ಯಾ.ವೈ.ಭಾಸ್ಕರ್ ರಾವ್ ಅವರ ಪುತ್ರ ಅಶ್ವಿನ್ ರಾವ್ ವಿರುದ್ಧ ಎಫ್ಐಆರ್ ದಾಖಲಾಗಿದೆ.  
 
ಬೆಂಗಳೂರು ನಗರ ಲೋಕಾಯುಕ್ತ ಎಸ್‌ಪಿ ಸೋನಿಯಾ ನಾರಂಗ್ ಅವರು ಈ ಪ್ರಕರಣ ದಾಖಲಿಸಿಕೊಂಡಿದ್ದು, ಭ್ರಷ್ಟಾಚಾರ ನಿಗ್ರಹ ಕಾಯಿದೆ 13ರ ಅಡಿಯಲ್ಲಿ ದೂರು ದಾಖಲಿಸಲಾಗಿದೆ. ಆರೋಪಿ 1 ಅಶ್ವಿನ್ ರಾವ್ ಅತಿಯಾಸ್ ಕೃಷ್ಣರಾವ್ ಎಂದು ನಮೂದಿಸಿ ಭಾರತೀಯ ದಂಡ ಸಂಹಿತೆ ಕಲಂ 384, 419, 120(ಬಿ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. 
 
ಇನ್ನು ಅಶ್ವಿನ್ ರಾವ್ ಈಗಾಗಲೇ ಪ್ರಕಱಣವನ್ನು ಎರಡು ಕಡೆಗಳಿಂದ ತನಿಖೆ ನಡೆಸಲಾಗುತ್ತಿದೆ. ಅಲ್ಲದೆ ಲೋಕಾಯುಕ್ತ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿರುವ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳೇ ತನಿಖೆ ನಡೆಸುವುದು ಸರಿಯಲ್ಲ ಎಂದು ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿ ಹೈಕೋರ್ಟ್ ನಿಂದ ನಾರಂಗ್ ನೇತೃತ್ವದ ತನಿಖೆಗೆ ತಡೆಯನ್ನೂ ನೀಡಿದ್ದಾರೆ. ಆದರೆ ಮೂಲಗಳ ಪ್ರಕಾರ ಕೋರ್ಟ್ ಆದೇಶಕ್ಕೂ ಮುನ್ನವೇ ನಾರಂಗ್ ಎಫ್ಐಆರ್ ದಾಖಲಿಸಿದ್ದರು. ಅಲ್ಲದೆ ದೂರು ದಾಖಲಾತಿಯ ಪ್ರತಿಯನ್ನು ಲೋಕಾಯುಕ್ತ ನ್ಯಾಯಾಲಯಕ್ಕೆ ಸಲ್ಲಿಸಿದ್ದರು ಎನ್ನಲಾಗಿದೆ. 
 
ಏನಿದು ಪ್ರಕರಣ?: 
ಲೋಕಾಯುಕ್ತ ಇಲಾಖೆಯಲ್ಲಿನ ಅಧಿಕಾರಿಗಳೇ ಭ್ರಷ್ಟರನ್ನು ರಕ್ಷಿಸಲು 1 ಕೋಟಿ ರೂ. ಲಂಚ ಪಡೆದಿದ್ದಾರೆ ಎಂಬ ಆರೋಪ ಇದಾಗಿದ್ದು, ಎಸ್‌ಪಿ ಸೋನಿಯಾ ನಾರಂಗ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿತ್ತು. ಆದರೆ ಲೋಕಾಯುಕ್ತ ಇಲಾಖೆಯಲ್ಲಿ ಪ್ರಕರಣ ನಡೆದಿದ್ದು, ಲೋಕಾಯುಕ್ತ ಇಲಾಖೆಯ ಅಧಿಕಾರಿಗಳೇ ತನಿಖೆ ನಡೆಸುವುದು ಸರಿಯಲ್ಲ ಎಂದು ನೆಪ ಹೇಳಿದ್ದ ರಾಜ್ಯದ ಮುಖ್ಯ ಲೋಕಾಯುಕ್ತ ನ್ಯಾ. ವೈ.ಭಾಸ್ಕರ್ ರಾವ್ ಅವರು ತಮ್ಮ ಅಧಿಕಾರ ಬಳಸಿ ಲೋಕಾಯುಕ್ತ ತನಿಖೆಗೆ ತಡೆ ನೀಡಿ ಪ್ರಕರಣವನ್ನು ಸಿಸಿಬಿಗೆ ವಹಿಸಿದ್ದರು.
 
ಆದರೆ ಈ ಸಂಬಂಧ ಪ್ರತಿಕ್ರಿಯಿಸಿದ್ದ ಉಪ ಲೋಕಾಯುಕ್ತ ಸುಭಾಷ್ ಬಿ. ಅಡಿ ಅವರು, ಪ್ರಕರಣವನ್ನು ವರ್ಗಾಯಿಸುವ ಬಗ್ಗೆ ಲೋಕಾಯುಕ್ತರು ತಮ್ಮ ಬಳಿ ಸಲಹೆ ಪಡೆದಿಲ್ಲ. ಅಲ್ಲದೆ ಸಿಸಿಬಿಗೆ ಭ್ರಷ್ಟಾಚಾರ ಪ್ರಕರಣಗಳನ್ನು ತನಿಖೆ ನಡೆಸುವ ಅಧಿಕಾರ ಇದೆಯೇ ಎಂಬ ಬಗ್ಗೆ ನನಗೆ ತಿಳಿದಿಲ್ಲ ಎಂದಿದ್ದರು. ಜೊತೆಗೆ ಸೋನಿಯಾ ನಾರಂಗ್ ಅವರಿಗೆ ತಮ್ಮ ತನಿಖೆಯನ್ನು ಮುಂದುವರಿಸುವಂತೆ ಆದೇಶಿಸಿದ್ದರು. ಈ ಹಿನ್ನೆಲೆಯಲ್ಲಿ ನಾರಂಗ್ ತನಿಖೆಯನ್ನು ಮುಂದುವರಿಸಿದ್ದರು. ಆದರೆ ಹೈಕೋರ್ಟ್‌ ಇಂದು ತನಿಖೆ ನಿಲ್ಲಿಸಲು ತಡೆಯಾಜ್ಞೆ ಹೊರಡಿಸಿದೆ.
 
ಪ್ರಕರಣದ ಸಿಸಿಬಿ ತನಿಖೆ ಸಂಬಂಧ ಕೆಲ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಮುಖ್ಯ ಲೋಕಾಯುಕ್ತರು ಸರ್ಕಾರಕ್ಕೆ ವಿಶೇಷ ತನಿಖಾ ತಂಡವನ್ನು ರಚಿಸುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಎಸ್ಐಟಿಯನ್ನು ರಚಿಸಿದ್ದರು. ಪ್ರಸ್ತುತ ಕಾರಾಗೃಹ ಎಡಿಜಿಪಿ ಕಮಲ್ ಪಂತ್ ನೇತೃತ್ವದ ತಂಡ ಪ್ರಕರಣದ ತನಿಖೆ ನಡೆಯುತ್ತಿದೆ.

ವೆಬ್ದುನಿಯಾವನ್ನು ಓದಿ