ಬಂದ್ ಮುಕ್ತಾಯಕ್ಕೆ 1 ಗಂಟೆ ಬಾಕಿ: ಸರ್ಕಾರಿ ಬಸ್ ಸಂಚಾರ ಆರಂಭ

ಬುಧವಾರ, 2 ಸೆಪ್ಟಂಬರ್ 2015 (17:26 IST)
ಕೇಂದ್ರ ಸರ್ಕಾರದ ಕಾರ್ಮಿಕ ನೀತಿಯನ್ನು ವಿರೋಧಿಸಿ ಇಂದು ನಡೆಸಲಾಗುತಿದ್ದ ಬಂದ್ ಹಿನ್ನೆಲೆಯಲ್ಲಿ ಸಾರಿಗೆ ವ್ಯವಸ್ಥೆ ಇಲ್ಲದೆ ಪ್ರಯಾಣಿಕರು ಪರದಾಡುತ್ತಿದ್ದ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಸಂಚಾರ ಸರ್ಕಾರಿ ಬಸ್ ಗಳ ಸಂಚಾರ ಆರಂಭಿಸಲಾಗಿದೆ. 
 
ಕಾರ್ಮಿಕ ಸಂಘಟನೆಗಳು ಘೋಷಿಸಿದ್ದ ಬಂದ್ ಹಿನ್ನೆಲೆಯಲ್ಲಿ ತೊಂದರೆಯಾಗಬಹುದು ಎಂಬ ಕಾರಣದಿಂದ ಕೆಎಸ್ಆರ್‌ಟಿಸಿ ಹಾಗೂ ಬಿಎಂಟಿಸಿ ಬಸ್‌ಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಪರಿಣಾಮ ಸರಿಯಾದ ವೇಳೆಗೆ ಸಂಚಾರ ಸೌಲಭ್ಯವಿಲ್ಲದೆ ಪ್ರಯಾಣಿಕರು ಪರದಾಡುವಂತಹ ಪರಿಸ್ಥಿತಿ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಯಾಣಿಕರ ಪರದಾಟವನ್ನು ಕಂಡ ಅಧಿಕಾರಿಗಳು ಪ್ರಸ್ತುತ ನಿಧಾನವಾಗಿ, ಅಗತ್ಯಕ್ಕೆ ತಕ್ಕಂತೆ ಬಸ್ ಸಂಚಾರವನ್ನು ಆರಂಭಿಸಿದ್ದಾರೆ. 
 
ಬೆಂಗಳೂರು ನಗರದಲ್ಲಿ ಮೊದಲ ಹಂತವಾಗಿ ಕಾಡುಗೋಡಿ ಹಾಗೂ ಅತ್ತಿಬೆಲೆ ಕಡೆಗೆ ಎರಡು ವೋಲ್ವೋ ಬಸ್‌ಗಳನ್ನು ಬಿಡಲಾಗಿದ್ದು, ಮೆಜೆಸ್ಟಿಕ್‌ನಿಂದ ಹೊರಟು ಸಂಚಾರ ಆರಂಭಿಸಿವೆ. ಅಂತೆಯೇ ರಾಜಧಾನಿಯಿಂದ ರಾಜ್ಯದ ಇತರೆ ಜಿಲ್ಲೆಗಳಿಗೂ ಕೂಡ ಕೆಎಸ್ಆರ್‌ಟಿಸಿ ಬಸ್‌ಗಳು ಸಂಚಾರ ಆರಂಭಿಸಿವೆ. ಇನ್ನು ಮೈಸೂರಿನಲ್ಲಿಯೂ ಕೂಡ ಇಂತಹುದೇ ವಾತಾವರಣ ನಿರ್ಮಾಣವಾಗಿತ್ತು. ಅಲ್ಲಿಯೂ ಕೂಡ ಸರ್ಕಾರಿ ಬಸ್‌ಗಳ ಸಂಚಾರ ಪ್ರಾರಂಭವಾಗಿದೆ. 

ವೆಬ್ದುನಿಯಾವನ್ನು ಓದಿ