ಆರ್‌ಟಿಐ ಕಾರ್ಯಕರ್ತನ ಮೇಲೆ ಹಲ್ಲೆ: ರಾಜಕೀಯ ಪ್ರಭಾವಿ ಭಾಗಿ ಶಂಕೆ

ಸೋಮವಾರ, 25 ಮೇ 2015 (15:35 IST)
ನಾಲ್ಕೈದು ಬೈಕ್‌ಗಳಲ್ಲಿ ಬಂದ ತಂಡವೊಂದು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಆರ್‌ಟಿಐ ಕಾರ್ಯಕರ್ತರೋರ್ವನನ್ನು ತಡೆಗಟ್ಟಿ ತೀವ್ರವಾಗಿ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ನಗರದ ಅಂಬೇಡ್ಕರ್ ಸರ್ಕಲ್‌ನಲ್ಲಿ ನಡೆದಿದೆ. 
 
ಮಾಹಿತಿ ಹಕ್ಕು ಕಾರ್ಯಕರ್ತ ಸಿ.ಹೆಚ್. ಗೌರ್ ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದು, ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳು ಕಾರ್ಯಕರ್ತ ಗೌರ್ ಅವರನ್ನು ಪ್ರಸ್ತುತ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ.  
 
ಇನ್ನು ಮಾಧ್ಯಮಗಳೊಂದಿಗೆ ಕಾರ್ಯಕರ್ತ ಗೌರ್ ಮಾತನಾಡಿದ್ದು, ನಾಲ್ಕೈದು ಬೈಕ್‌ಗಳಲ್ಲಿ ಬಂದ ತಂಡವೊಂದು ನನ್ನ ಬೈಕ್‌ನ್ನು ಅಡ್ಡಗಟ್ಟಿ ಕೋಲಿನಿಂದ ಹಲ್ಲೆ ನಡೆಸಿದರು ಎಂದ ಅವರು, ನನ್ನ ಮೇಲೆ ಹಲ್ಲೆ ನಡೆಸಿರುವವರು ಕಾಂಗ್ರೆಸ್ ಪಕ್ಷದ ಹಾಲಿ ಸದಸ್ಯ ಪ್ರಕಾಶ್ ಕ್ಯಾರಕಟ್ಟಿ ಅವರ ಬೆಂಬಲಿಗರೇ ಎಂದು ದೂರಿದರು.  
 
ಇದೇ ವೇಳೆ, ನಾನು ಈ ಹಿಂದೆ ಮಾಹಿತಿ ಹಕ್ಕು ಕಾಯಿದೆ ಅಡಿಯಲ್ಲಿ ಕ್ಯಾರಕಟ್ಟಿ ಅವರ ಹಲವು ಅಕ್ರಮಗಳನ್ನು ಬಯಲಿಗೆಳೆದಿದ್ದೆ. ಈ ಹಿನ್ನೆಲೆಯಲ್ಲಿ ಅದೇ ದ್ವೇಷದಿಂದಲೇ ನನ್ನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿದರು.      
 
ಕ್ಯಾರಕಟ್ಟಿ ಅವರು ಇದಕ್ಕೂ ಮುನ್ನ ಮಾಜಿ ಮೇಯರ್ ಆಗಿ ಕೂಡ ಸೇವೆ ಸಲ್ಲಿಸಿದ್ದು, ಪ್ರಭಾವಿ ವ್ಯಕ್ತಿಯಾಗಿದ್ದಾರೆ ಎನ್ನಲಾಗಿದೆ. ಪ್ರಸ್ತುತ ಮಹಾನಗರ ಪಾಲಿಕೆಯ ಕಾಂಗ್ರಸ್ ಸದಸ್ಯರಾಗಿದ್ದಾರೆ.  
 
ನಗರದ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ