ರೋಗಿ ಸಾವನ್ನಪ್ಪಿದ್ದಾನೆ ಎಂದು ತಿಳಿಸಿದ್ದಕ್ಕೆ ವೈದ್ಯರ ಮೇಲೆ ಹಲ್ಲೆ

ಶನಿವಾರ, 23 ಮೇ 2015 (11:49 IST)
ಗಾಯಾಳು ರೋಗಿ ಮೃತಪಟ್ಟಿದ್ದಾನೆ ಎಂಬ ಮಾಹಿತಿಯನ್ನು ತಿಳಿಸಿದ ಚಿಕ್ಕೋಡಿಯ ಸರ್ಕಾರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಯೋರ್ವರ ಮೇಲೆ ರೋಗಿಯ ಸಂಬಂಧಿಕರು ಹಲ್ಲೆ ನಡೆಸಿದ್ದಾರೆ. 
 
ಹಲ್ಲೆಗೊಳಗಾದ ವೈದ್ಯರನ್ನು ಡಾ.ವಿ.ವಿ.ಶಿಂಧೆ ಎಂದು ಹೇಳಲಾಗಿದ್ದು, ಅವರ ಮೇಲೆ ಹಲ್ಲೆ ರೋಗಿಯ ಸಂಬಂಧಿಕರು ನಿನ್ನೆ ರಾತ್ರಿ ಹಲ್ಲೆ ನಡೆಸಿದ್ದಾರೆ. 
 
ಪ್ರಕರಣದ ಹಿನ್ನೆಲೆ: ತಾಲೂಕಿನ ಖಡಕಲಾಟ ಗ್ರಾಮದ ಲಕ್ಷ್ಮೀ ಕ್ರಾಸ್ ಬಳಿ ರಾತ್ರಿ ಅಪಘಾತ ಸಂಭವಿಸಿದ್ದ ಪರಿಣಾಮ ಅದೇ ಗ್ರಾಮದ ನಿವಾಸಿ ಮಾರುತಿ ಅಪ್ಪಣ್ಣಾ ಮಾಡಗಿ(55) ಎಂಬುವವರು ತೀವ್ರವಾಗಿ ಗಾಯಗೊಂಡಿದ್ದರು. ಇದನ್ನು ಕಂಡ ಸ್ಥಳೀಯರು ಆತನನ್ನು ಕೂಡಲೇ ಚಿಕ್ಕೋಡಿ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲಿಸಿದ್ದರು. ಈ ಸಂದರ್ಭದಲ್ಲಿ ಆತನನ್ನು ಪರೀಕ್ಷೆ ಮಾಡಿದ್ದ ವೈದ್ಯ ಡಾ.ವಿಠ್ಠಲ್‌ ಶಿಂಧೆ, ಆತ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. 
 
ಬಳಿಕ ಪ್ರಕರಣ ಕುರಿತು ಚಿಕ್ಕೋಡಿಯ ಪೊಲೀಸ್ ಠಾಣೆಗೆ ಮೃತಪಟ್ಟ ಬಗ್ಗೆ ವೈದ್ಯರೇ ಖುದ್ದು ಮಾಹಿತಿ ನೀಡಿದ್ದರು. ಆದರೆ ಮೃತನ ಸಂಬಂಧಿಕರಾದ ಮಹಾಂತೇಶ ಗಿಂಡೆ, ಬಾಬಾಸಾಹೇಬ ಮಲ್ಲಪ್ಪಾ ಡೊಂಗರೆ ಹಾಗೂ ಇತರ ಮೂವರು ಸೇರಿಕೊಂಡು ಶುಕ್ರವಾರ ತಡರಾತ್ರಿ ಆಸ್ಪತ್ರೆಗೆ ಆಗಮಿಸಿ ವೈದ್ಯರ ಮೇಲೆ ಏಕಾಏಕಿ ಎರಗಿ ಹಲ್ಲೆ ನಡೆಸಿದ್ದಾರೆ. 
 
ಇದೇ ವೇಳೆ, ಕಲ್ಲು ತೂರಾಟ ನಡೆಸುವ ಮೂಲಕ ತುರ್ತು ಚಿಕಿತ್ಸೆ ನೀಡುವ ವೈದ್ಯಕೀಯ ಸಾಮಗ್ರಿಗಳನ್ನು ಹಾಗೂ ಆಸ್ಪತ್ರೆಯ ಕಿಟಕಿಗೆ ಅಳವಡಿಸಿದ್ದ ಗಾಜುಗಳನ್ನು ಒಡೆದು ಹಾಕಿದ್ದಾರೆ. 
 
ಇನ್ನು ಸುದ್ದಿ ತಿಳಿದ ಚಿಕ್ಕೋಡಿ ಪೊಲೀಸರು, ಘಟನಾ ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಕೊಂಡು ಐವರು ಆರೋಪಿಗಳನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ. ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳಾದ ಜಿಲ್ಲೆಯ ಡಿವೈಎಸ್ಪಿ ಎಸ್.ಆರ್. ಪಾಟೀಲ, ಸಿಪಿಐ ಎಂ.ಎಸ್. ನಾಯ್ಕರ, ಪಿಎಸ್ಐ ಸಂಗಮೇಶ ದಿಡಗಿನಾಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವೆಬ್ದುನಿಯಾವನ್ನು ಓದಿ