ಮಾಜಿ ಸಿಎಂ ಜಗದೀಶ್ ಶೆಟ್ಟರ್ ವಿರುದ್ಧ ಎಫ್‌ಐಆರ್ ದಾಖಲು

ಶುಕ್ರವಾರ, 1 ಆಗಸ್ಟ್ 2014 (13:27 IST)
ಸ್ವಾತಂತ್ರ್ಯ ಹೋರಾಟಗಾರರೊಬ್ಬರ ಪುತ್ರನಿಗೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನಿಯಮ ಉಲ್ಲಂಘನೆ ಮಾಡಿ ಭೂಮಿ ಮಂಜೂರು ಮಾಡಿದ ಆರೋಪದ ಮೇಲೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ಅವರ ವಿರುದ್ಧ ಬೆಂಗಳೂರು ಮಹಾನಗರ ಕಾರ್ಯಪಡೆ (ಬಿಎಂಟಿಎಫ್‌) ಗುರುವಾರ ದೂರು ದಾಖಲಿಸಿಕೊಂಡಿದೆ.
 
ಒಕ್ಕಲಿಗರ ಸಂಘದ ಸಂಚಾಲಕ ಎ.ಪ್ರಸಾದ್‌ ಅವರು ನೀಡಿದ ದೂರಿನ ಮೇರೆಗೆ ಶೆಟ್ಟರ್‌ ಅವರ ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಸೂರ್ಯನಾರಾಯಣ ರಾವ್‌ ಅವರ ಪುತ್ರ ಸುಂದರೇಶ್‌ ಅವರಿಗೆ ನಿಯಮಬಾಹಿರವಾಗಿ ಭೂಮಿ ಮಂಜೂರು ಮಾಡಲಾಗಿದೆ ಎಂಬ ಆರೋಪ ದೂರಿನಲ್ಲಿದೆ. ಪ್ರಕರಣದಲ್ಲಿ ಸುಂದರೇಶ್‌ ಹಾಗೂ ಸರ್ಕಾರಿ ಅಧಿಕಾರಿಗಳನ್ನೂ ಆರೋಪಿಗಳನ್ನಾಗಿ ಹೆಸರಿಸಲಾಗಿದೆ.
 
ಒಕ್ಕಲಿಗರ ಸಂಘದಿಂದ ಪತ್ರಿಕಾ ಗೋಷ್ಠಿ ನಡೆಸಿದ್ದ ಪದಾಧಿಕಾರಿಗಳು ಶೆಟ್ಟರ್‌ ವಿರುದ್ಧ ಅಕ್ರಮವಾಗಿ ಭೂಮಿ ಮಂಜೂರು ಮಾಡಿದ ಆರೋಪ ಹೊರಿಸಿದ್ದರು. ಅದರ ಬೆನ್ನಹಿಂದೆಯೇ ಈಗ ದೂರು ದಾಖಲಾಗಿದೆ. ಸುಂದರೇಶ್‌ ಅವರಿಗೆ ಕೃಷಿಭೂಮಿ ನೀಡುವಂತೆ ಹೈಕೋರ್ಟ್‌ ನಿರ್ದೇಶನ ನೀಡಿದ್ದರೂ ಶೆಟ್ಟರ್‌ ಅವರು ಬಿಬಿಎಂಪಿ ವ್ಯಾಪ್ತಿಯಲ್ಲಿ ಕೃಷಿಯೇತರ ಭೂಮಿಯನ್ನು ಅವರಿಗೆ ಮಂಜೂರು ಮಾಡಿದ್ದಾರೆ ಎಂದು ಪ್ರಸಾದ್‌  ದೂರಿನಲ್ಲಿ ವಿವರಿಸಿದ್ದಾರೆ.
 
ವಿವರ: ಸೂರ್ಯನಾರಾಯಣ ರಾವ್‌ ಅವರಿಗೆ 1967ರಲ್ಲಿ ನಾಲ್ಕು ಎಕರೆ ಭೂಮಿಯನ್ನು ಮಂಜೂರು ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿತ್ತು. ಆದರೆ, ಕಾನೂನಿನಲ್ಲಿ ಅದಕ್ಕೆ ಅವಕಾಶವಿಲ್ಲದ ಕಾರಣ ಭೂಮಿ ಮಂಜೂರು ಮಾಡುವುದು ಸಾಧ್ಯವಾಗಿರಲಿಲ್ಲ.
 
ಮಂಜೂರಾದ ಭೂಮಿ ಸಿಗದಿದ್ದರಿಂದ ರಾವ್‌ ಅವರು ಹೈಕೋರ್ಟ್‌ ಮೆಟ್ಟಿಲು ಏರಿದ್ದರು. ವಿಚಾರಣೆ ನಡೆಯುವಾಗಲೇ 1989ರಲ್ಲಿ ಅವರು ನಿಧನ ಹೊಂದಿದರು. ಅವರ ನಿಧನದ ನಂತರ ಸುಂದರೇಶ್‌ ಅವರು ಕಾನೂನು ಸಮರ ಮುಂದುವರಿಸಿದರು. 2010ರಲ್ಲಿ ತೀರ್ಪು ನೀಡಿದ ಹೈಕೋರ್ಟ್‌ ಸುಂದರೇಶ್‌ ಅವರಿಗೆ ಕೃಷಿಭೂಮಿ ನೀಡುವಂತೆ ಆದೇಶಿಸಿತ್ತು.
 
ಎಡಿಜಿಪಿ ವರ್ಗ: ಕಾಕತಾಳೀಯ ಎನ್ನುವಂತೆ ನಗರದ ಹಿರಿಯ ಪೊಲೀಸ್‌ ಅಧಿಕಾರಿಗಳ ಭಾರಿ ವರ್ಗಾವಣೆಯನ್ನೂ ರಾಜ್ಯ ಸರ್ಕಾರ ಗುರುವಾರ ಮಾಡಿದೆ. ಬಿಎಂಟಿಎಫ್‌ನ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ (ಎಡಿಜಿಪಿ) ಡಾ. ಆರ್‌.ಪಿ. ಶರ್ಮಾ ಅವರು  ದೂರು ದಾಖಲಿಸಿಕೊಂಡ ಕೆಲವೇ ಗಂಟೆಗಳಲ್ಲಿ ವರ್ಗವಾಗಿದ್ದಾರೆ.
 
ಬಿಎಂಟಿಎಫ್‌ನ ಮುಖ್ಯಸ್ಥರಾಗಿ ಶರ್ಮಾ ಅವರು ಅಧಿಕಾರ ಸ್ವೀಕರಿಸಿದ ದಿನದಿಂದಲೂ ಈ ತನಿಖಾ ಸಂಸ್ಥೆ ಭಾರಿ ಸುದ್ದಿಯಲ್ಲಿತ್ತು. ಶಾಸಕ ಆರ್‌. ಅಶೋಕ, ಹಿಂದಿನ ಮೇಯರ್‌ ಡಿ.ವೆಂಕಟೇಶಮೂರ್ತಿ, ಹಿಂದಿನ ಶಾಸಕ ಎಂ. ಶ್ರೀನಿವಾಸ್‌, ಬಿಜಿಎಸ್‌ ಸಮೂಹ ಸಂಸ್ಥೆಯ ಮುಖ್ಯಸ್ಥರಾದ ಪ್ರಕಾಶನಾಥ ಸ್ವಾಮೀಜಿ, ಬಿಬಿಎಂಪಿ, ಬಿಡಿಎ ಮತ್ತು ಜಲ ಮಂಡಳಿ ಅಧಿಕಾರಿಗಳ ವಿರುದ್ಧ ಅವರ ಅವಧಿಯಲ್ಲಿ ಬಿಎಂಟಿಎಫ್‌ ಪ್ರಕರಣ ದಾಖಲಿಸಿಕೊಂಡಿತ್ತು.

ವೆಬ್ದುನಿಯಾವನ್ನು ಓದಿ